ಪಾಕಿಸ್ತಾನ ಭಯೋತ್ಪಾದನೆಯನ್ನು ವಿಶ್ವಕ್ಕೆಲ್ಲ ರಫ್ತು ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಭಾರತ, ಅದರಲ್ಲೂ ಕರ್ನಾಟಕವು ಪಾಕಿಸ್ತಾನಕ್ಕೆ ಕಬ್ಬಿಣದ ಅದಿರು ರಫ್ತು ಮಾಡುತ್ತಿದೆ ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ. ಈಗ ಅದೂ ಬಹಿರಂಗವಾಗಿದೆ. ಇದು ಅಪ್ಪಟ ಸುಳ್ಳು ಎಂದು ಅತ್ತ ಈ ಕುರಿತು ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆ ವಿವಾದ ರಾಜ್ಯದಲ್ಲಿ ಹೊತ್ತಿ ಉರಿಯುತ್ತಿರುವುದು ತಿಳಿದೇ ಇದೆ. ಇದು ಹೆಚ್ಚೆಂದರೆ ಗೋವಾ ಮತ್ತು ಆಂಧ್ರಪ್ರದೇಶಗಳಿಗೂ ಹರಡಿದೆ ಎಂದು ಹೇಳಲಾಗುತ್ತಿತ್ತು. ರಫ್ತಾಗುತ್ತಿರುವುದು ಚೀನಾ ಮತ್ತಿತರ ರಾಷ್ಟ್ರಗಳಿಗೆ ಎಂದು ತಿಳಿದಿದ್ದರೂ, ಪಾಕಿಸ್ತಾನಕ್ಕೂ ಹೋಗುತ್ತಿದೆ ಎಂಬುದು ಬೆಳಕಿಗೆ ಬಂದಿರಲಿಲ್ಲ.
ಆದರೆ 'ಪ್ರಜಾವಾಣಿ' ಪತ್ರಿಕೆ ತನಿಖಾ ವರದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ ರಾಜ್ಯದಿಂದ 78,710 ಟನ್ ಅದಿರು ಉತ್ತರ ಕರ್ನಾಟಕದ ಬೇಲೆಕೇರಿ ಬಂದರಿನಿಂದ ಪಾಕಿಸ್ತಾನದ ಕರಾಚಿಯಲ್ಲಿರುವ 'ಪಾಕಿಸ್ತಾನ್ ಸ್ಟೀಲ್ಸ್'ಗೆ ಪೂರೈಕೆಯಾಗಿದೆ. ರಾಜ್ಯದಲ್ಲಿನ ಗಣಿಗಾರರು ದುಬೈಯಲ್ಲಿನ ದಲ್ಲಾಳಿಗಳ ಮೂಲಕ ಪಾಕಿಸ್ತಾನದ ಸರಕಾರಿ ಅಂಗಸಂಸ್ಥೆಗೆ ಅದಿರು ಪೂರೈಸಿದ್ದಾರೆ.
10-12-2009ರಂದು 39,240 ಟನ್ ಹಾಗೂ 9-1-2010ರಂದು 39,240 ಟನ್ ಅದಿರನ್ನು ಹೊತ್ತ ಎರಡು ಹಡಗುಗಳು ಬೇಲೇಕೇರಿ ಬಂದರಿನಿಂದ ಪಾಕಿಸ್ತಾನಕ್ಕೆ ಬಂದಿರುವುದನ್ನು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದ್ದು, ಕಳಪೆ ಅದಿರನ್ನು ಪೂರೈಸಿದ್ದೇ ಅದಿರಿನ ಮೂಲ ಬಹಿರಂಗವಾಗಲು ಕಾರಣವಾಯಿತು.
ರಾಜ್ಯದಿಂದ ಎರಡನೇ ಬಾರಿ, ಅಂದರೆ ಇದೇ ವರ್ಷದ ಜನವರಿಯಲ್ಲಿ ರಫ್ತಾಗಿದ್ದ ಅದಿರು ಗುಣಮಟ್ಟದ್ದಾಗಿರಲಿಲ್ಲ. ಈ ಬಗ್ಗೆ ಪಾಕಿಸ್ತಾನದ ಸಂಸತ್ತಿನಲ್ಲಿ ಚರ್ಚೆಯೂ ನಡೆದಿತ್ತು. ಸಂಸತ್ ಸದಸ್ಯರ ಪ್ರಶ್ನೆಗಳಿಗೆ ಸಚಿವರೊಬ್ಬರು ಉತ್ತರವನ್ನೂ ನೀಡಿದ್ದರು. ಅಲ್ಲದೆ ತಾವು ಎರಡನೇ ಹಡಗಿನಲ್ಲಿನ ಅದಿರಿಗೆ ಹಣ ಪಾವತಿ ಮಾಡಿಲ್ಲ ಎಂಬುದನ್ನೂ ಸ್ಪಷ್ಟಪಡಿಸಲಾಗಿತ್ತು.
ಎಲ್ಲಾ ಮಾಯ, ಇಲ್ಲಿ ಎಲ್ಲಾ ಮಾಯ... ರಾಜ್ಯದಿಂದ ಪಾಕಿಸ್ತಾನಕ್ಕೆ ಅದಿರು ರಫ್ತಾಗಿರುವುದು, ಪಾಕ್ ಸಂಸತ್ತಿನಲ್ಲಿ ಚರ್ಚೆ ನಡೆದಿರುವುದು ಮತ್ತು ದುಬೈಯಲ್ಲಿನ ದಲ್ಲಾಳಿ ಕಂಪನಿಯ ಕುರಿತು ರಾಜ್ಯದ ಲೋಕಾಯುಕ್ತರಿಗೆ ವಿವರವಾದ ದೂರೊಂದು ಬಂದಿತ್ತು.
ಇದರ ಜಾಡು ಹಿಡಿದ ಲೋಕಾಯುಕ್ತ ಅಧಿಕಾರಿಗಳು ಬೇಲೇಕೇರಿ ಬಂದರಿಗೆ ಭೇಟಿ ನೀಡಿದ್ದರು. ಆದರೆ ಇಲ್ಲಿನ ಬಂದರಿನಿಂದ ಅದಿರು ರಫ್ತಾಗಿರುವ ಕುರಿತು ಬಂದರಿನಲ್ಲಿ ದಾಖಲೆಯೇ ಇಲ್ಲ. ದಾಖಲೆಗಳನ್ನು ನಾಶಪಡಿಸಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.
ದಾಖಲೆಗಳು ಕಂಡು ಬರದೇ ಇರುವ ಹಿನ್ನೆಲೆಯಲ್ಲಿ ಪ್ರಕರಣ ಜಟಿಲವಾಗುತ್ತಿದೆ. ಹಾಗಾಗಿ ಕರಾಚಿ ಮತ್ತು ದುಬೈಗಳಿಂದ ಮಾಹಿತಿ ಸಂಗ್ರಹ ಅನಿವಾರ್ಯ. ಇದನ್ನು ಕೇಂದ್ರ ಸರಕಾರದ ಇಲಾಖೆಗಳಷ್ಟೇ ಮಾಡಬಹುದಾಗಿದೆ. ನಮಗೆ ಕೇಂದ್ರದ ನೆರವು ಅಗತ್ಯವಿದೆ. ನೆರವು ಪಡೆಯಲು ರಾಜ್ಯವು ಅನುಮತಿ ನೀಡಬೇಕೆಂದು ಲೋಕಾಯುಕ್ತರು ಬರೆದಿರುವ ಪತ್ರಕ್ಕೆ ಬಿಜೆಪಿ ಸರಕಾರ ಅನುಮತಿ ನೀಡಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ನಿಜವಾಗಿಯೂ ಎಷ್ಟು ಪ್ರಮಾಣದಲ್ಲಿ ಅದಿರು ರಫ್ತಾಗಿದೆ ಎಂಬ ವಿಚಾರವು ಲೋಕಾಯುಕ್ತರ ಮೂಲಕ ಬಹಿರಂಗವಾಗಲಿದೆ.
ಪಾಕಿಸ್ತಾನಕ್ಕೆ ಅದಿರು ರಫ್ತಾಗಿಲ್ಲ... ಹೀಗೆಂದು ಹೇಳಿರುವುದು ಸಚಿವ ಹಾಗೂ ಗಣಿ ಉದ್ಯಮಿ ಜಿ. ಜನಾರ್ದನ ರೆಡ್ಡಿ. ಕರ್ನಾಟಕದಿಂದ ಪಾಕಿಸ್ತಾನಕ್ಕೆ ಕಬ್ಬಿಣದ ಅದಿರು ರಫ್ತಾಗಿದೆ ಎಂಬ ವರದಿಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಅಂತಹ ಯಾವುದೇ ಚಟುವಟಿಕೆಗಳು ನಡೆದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವಂತೆ ರಾಜ್ಯದಿಂದ ಪಾಕಿಸ್ತಾನಕ್ಕೆ ಅಕ್ರಮವಾಗಿ ಅದಿರು ರಫ್ತು ಮಾಡಲಾಗಿಲ್ಲ. ಈ ಕುರಿತು ನಾನು ಬಳ್ಳಾರಿಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರ ಜತೆ ಮಾತನಾಡಿದ್ದೇನೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.