ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ಪಾದಯಾತ್ರೆಗೆ ಜನಬೆಂಬಲ ಸಿಕ್ಕಿದೆ: ಸಿದ್ದರಾಮಯ್ಯ (Congress | Siddaramaiah | BJP | Yeddyurappa | KPCC | Pada yathre)
ಕಾಂಗ್ರೆಸ್ ಪಾದಯಾತ್ರೆಗೆ ಜನಬೆಂಬಲ ಸಿಕ್ಕಿದೆ: ಸಿದ್ದರಾಮಯ್ಯ
ಹಾನಗಲ್, ಶನಿವಾರ, 7 ಆಗಸ್ಟ್ 2010( 20:40 IST )
ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಜನಬೆಂಬಲ ದೊರೆತಿದೆ. ಇದೀಗ ಕಾಂಗ್ರೆಸ್ ಪಾದಯಾತ್ರೆಯಾಗಿ ಉಳಿದಿಲ್ಲ, ಅದು ಜನಾಂದೋಲನವಾಗಿ ರೂಪುಗೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
14ನೇ ದಿನವಾದ ಶನಿವಾರ ಮೊಳಕಾಲ್ಮೂರಿನಿಂದ ಹಾನಗಲ್‌ನತ್ತ ಪಾದಯಾತ್ರೆ ಸಾಗುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ರಾಜ್ಯದ ಮೂಲೆ, ಮೂಲೆಗಳಿಂದ ಜನ ಬರುತ್ತಿದ್ದಾರೆ. ಹಾಗಾಗಿ ಜನರ ದಂಡು ಕಂಡು ಆಡಳಿತಾರೂಢ ಬಿಜೆಪಿ ಸರಕಾರ ಮುಖಂಡರು ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಾದಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿಯಲ್ಲಿ ಒಳಗೊಳಗೆ ಕಸರತ್ತು ಆರಂಭಗೊಂಡಿದೆ. ನಮ್ಮದು ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ. ಅಕ್ರಮ ಗಣಿಗಾರಿಕೆ ಮಾಡುತ್ತಿರುವವರ ಬಗ್ಗೆ ಮಾತ್ರ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ನಾವು ಶಾಂತಿಯುತವಾಗಿ ಪಾದಯಾತ್ರೆ ಮಾಡಿಕೊಂಡು ಬಳ್ಳಾರಿ ನಗರ ತಲುಪುತ್ತೇವೆ. ಒಂದು ವೇಳೆ ಏನಾದ್ರೂ ಗಲಾಟೆ, ಗೊಂದಲ ಮಾಡಿದ್ರೆ ಬಿಜೆಪಿಯವರೇ ಮಾಡಬೇಕು. ನಮ್ಮಿಂದ ಯಾವುದೇ ಘರ್ಷಣೆ ನಡೆಯೋಲ್ಲ ಎಂದರು.
ಪಾದಯಾತ್ರೆ ಜನಾಂದೋಲನವಾಗುತ್ತಿರುವುದನ್ನು ಕಂಡು ಎಲ್ಲಿ ಸರಕಾರ ಪತನವಾಗುತ್ತದೋ ಎಂಬ ಆತಂಕದಿಂದ ಮುಖ್ಯಮಂತ್ರಿ ಯಡಿಯೂರಪ್ಪ ದಿನಕ್ಕೊಂದು ಹೇಳಿಕೆ ಕೊಡುತ್ತ, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.