ಬಳ್ಳಾರಿ ಗಣಿ ಧಣಿಗಳ ವಿರುದ್ಧ ಕಾನೂನು ಸಮರ ಸಾರಿದ್ದ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಅವರ ವಿರುದ್ಧವೇ ಈಗ ಬಿಜೆಪಿ ತಿರುಗೇಟು ನೀಡಲು ಮುಂದಾಗಿದೆ. ಕೊಂಡಯ್ಯ ಕೆಲ ಗಣಿ ಉದ್ಯಮಿಗಳಿಂದ ಹಣ ಪಡೆದು ಅವರ ಪರವಾಗಿ ಕೆಲಸ ಮಾಡುತ್ತಿದ್ದು, ಲಾಭದಾಯಕ ಹುದ್ದೆ ಆರೋಪದಡಿ ಅವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಮೃತ್ಯುಂಜಯ ಜಿನಗಾ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಕೊಂಡಯ್ಯ ಅವರು ಗಣಿ ಉದ್ಯಮಿಗಳ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು ಸಂವಿಧಾನದ 191ನೇ ವಿಧಿಯ ಅನುಸಾರ ಅವರ ಸದಸ್ಯತ್ವ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲೂ ಕ್ರಮ ಜರುಗಿಸಬೇಕು ಎಂದು ಜಿನಗಾ ಜುಲೈ 23ರಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕೊಂಡಯ್ಯ ಅವರು ಎಂಎಸ್‌ಪಿಎಲ್ ಕಂಪನಿಯಿಂದ ಹಣ ಪಡೆದು ವಿಧಾನಪರಿಷತ್‌ನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. 2008ರಿಂದಲೂ ಅವರು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಅಷ್ಟೇ ಅಲ್ಲ, ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರ ಸದಸ್ಯತ್ವ ರದ್ದು ಮಾಡಲು ಕೋರಿ ರಾಜ್ಯಪಾಲರಿಗೆ ದೂರು ನೀಡುವುದಕ್ಕೂ ಗಣಿ ಕಂಪನಿಯಿಂದ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.