ನೈಸರ್ಗಿಕ ಸಂಪನ್ಮೂಲ ರಕ್ಷಣೆ ಮಾಡಬೇಕಾದ್ದು ಸರಕಾರದ ಕರ್ತವ್ಯ. ಆದರೆ ಆಡಳಿತಾರೂಢ ಬಿಜೆಪಿ ಸರಕಾರ ದೇಶದ ಸಂಪತ್ತನ್ನು ನಾಲ್ಕು ಜನರ ಕೈಗೆ ನೀಡಿದೆ. ಗಣಿ ಸಂಪತ್ತು ಕೇವಲ ಒಂದು ಪಕ್ಷದ ಸ್ವತ್ತಲ್ಲ. ಗಣಿ ಸಂಪತ್ತು ಲೂಟಿಯಾಗುತ್ತಿದ್ದರೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರದ ಗದ್ದುಗೆ ಸಿಕ್ಕಿದ ಒಂದೇ ಅವಕಾಶದಲ್ಲಿ ಬಿಜೆಪಿ ತನ್ನ ಕರಾಳ ಮುಖ ಪ್ರದರ್ಶಿಸಿದೆ ಎಂದು ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ರಾಜ್ಯ ಕಾಂಗ್ರೆಸ್‌ನ ಬೆಂಗಳೂರು-ಬಳ್ಳಾರಿವರೆಗಿನ 16 ದಿನಗಳ ನಾಡ ರಕ್ಷಣಾ ನಡಿಗೆಯ ಬೃಹತ್ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ನಾವು ಯಾವುದೇ ಸವಾಲನ್ನು ಸ್ವೀಕರಿಸಲು ಸಿದ್ದವಾಗಿದ್ದೇವೆ. ಈ ಮೊದಲೇ ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿದ್ದರು. ಆ ಕಾರಣಕ್ಕಾಗಿಯೇ ಬಳ್ಳಾರಿ ಜಿಲ್ಲೆಯ ಜನರ ಕೋರಿಕೆ ಮೇರೆಗೆ ಬಳ್ಳಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ಬಳ್ಳಾರಿ ಜನರು ಸೋನಿಯಾಗಾಂಧಿ ಅವರ ಅಭೂತಪೂರ್ವ ಗೆಲುವಿಗೆ ಕಾರಣರಾಗಿದ್ದರು ಎಂದರು. ಅಲ್ಲದೇ ಕಾಂಗ್ರೆಸ್ ಪಾದಯಾತ್ರೆಗೆ ರಾಜ್ಯದ ಜನತೆ ನೀಡಿದ ಅಪಾರ ಬೆಂಬಲಕ್ಕೆ ಕೃತಜ್ಞತೆ ಅರ್ಪಿಸಿದರು.
ಅಷ್ಟೇ ಅಲ್ಲ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ವಿಶ್ವಮಟ್ಟಕ್ಕೆ ಏರಿಸಿದ್ದು ಕಾಂಗ್ರೆಸ್ ಪಕ್ಷ, ಬೆಂಗಳೂರನ್ನು ಅಭಿವೃದ್ದಿ ಪಥದತ್ತ ಒಯ್ದಿರುವುದು ಕೂಡ ಕಾಂಗ್ರೆಸ್ ಪಕ್ಷ ಎಂಬುದನ್ನು ಬಿಜೆಪಿ ಮನಗಾಣಬೇಕು. ಬೇರೆ ಯಾವುದೇ ಪಕ್ಷಗಳು ಬೆಂಗಳೂರು ಅಭಿವೃದ್ದಿಗೆ ಶ್ರಮಿಸಿಲ್ಲ ಎಂದರು.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಎಂಬಂತೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ ಬೆನ್ನಲ್ಲೇ, ಯುವತಿಯರ ಮೇಲೆ ದೌರ್ಜನ್ಯ, ರೈತರ ಮೇಲೆ ಗೋಲಿಬಾರ್ ಪ್ರಯೋಗ, ಕೋಮುಗಲಭೆಯ ಮೂಲಕ ತನ್ನ ಕರಾಳ ಮುಖವನ್ನು ಪ್ರದರ್ಶಿಸಿದೆ. ರಾಜ್ಯದ ಗಣಿ ಸಂಪತ್ತು ಲೂಟಿಯಾಗುತ್ತಿದ್ದರೂ ಕೂಡ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಲೂಟಿಕೋರರ ಬೆಂಬಲಕ್ಕೆ ನಿಂತಿದೆ. ಹಾಗಾಗಿ ಗಣಿ ಸಂಪತ್ತು ಎಲ್ಲ ಖಾಲಿಯಾಗುವ ಮೂಲಕ ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಪಾದಯಾತ್ರೆ ಮೂಲಕ ಎಚ್ಚರಿಕೆ-ಎಸ್.ಎಂ.ಕೃಷ್ಣ: ರಾಜ್ಯದ, ದೇಶದ ನೈಸರ್ಗಿಕ ಸಂಪತ್ತು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಾದಯಾತ್ರೆಯಿಂದ ಇತಿಹಾಸ ಸೃಷ್ಟಿಯಾಗಿದೆ. ನೈಸರ್ಗಿಕ ಸಂಪತ್ತು ದೇಶದ ಸ್ವತ್ತು. ಬಳ್ಳಾರಿ ಪುಣ್ಯಭೂಮಿಯಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಸಂಪತ್ತು ಲೂಟಿಯಾಗುವುದನ್ನು ತಡೆಯಬೇಕು. ಹಾಗಾಗಿ ಕಾಂಗ್ರೆಸ್ ಪಾದಯಾತ್ರೆ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮಾತನಾಡುತ್ತ ತಿಳಿಸಿದರು.
ಬಿಸಿಲನಾಡಲ್ಲಿ ಜನಸಾಗರ: ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಕಳೆದ ಜುಲೈ 25ರಂದು ಸಿಲಿಕಾನ್ ಸಿಟಿಯಿಂದ ಆರಂಭಿಸಿದ 16 ದಿನಗಳ ಪಾದಯಾತ್ರೆಯಲ್ಲಿ 320 ಕಿ.ಮೀ.ಸಾಗಿ ಇಂದು ಬೆಳಿಗ್ಗೆ ಬಳ್ಳಾರಿ ನಗರ ಪ್ರವೇಶಿಸಿತ್ತು. ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ತುಂಬಾ ಲಕ್ಷ ಸಂಖ್ಯೆಯಲ್ಲಿ ರಾಜ್ಯದ ಮೂಲೆ,ಮೂಲೆಯಿಂದ ಆಗಮಿಸಿದ್ದ ಕಾರ್ಯಕರ್ತರಿಂದ ತುಂಬಿ ಹೋಗಿತ್ತು.
ಬೆಂಗಳೂರು ರಸ್ತೆ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿ ಬಂದ ಕಾಂಗ್ರೆಸ್ ಮುಖಂಡರ ಪಾದಯಾತ್ರೆಗೆ ಸ್ಥಳೀಯರು ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.
ಕಾಂಗ್ರೆಸ್ ಬೃಹತ್ ಸಮಾವೇಶದ ಪರಿಣಾಮ ಎಂಬಂತೆ ಬಳ್ಳಾರಿಯ ಜಿಲ್ಲೆಯಾದ್ಯಂತ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ವಿರಳವಾಗಿತ್ತು. ಎಲ್ಲೆಲ್ಲೂ ಜನಸ್ತೋಮ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಮಾವೇಶದಲ್ಲಿ ಕಾರ್ಯಕರ್ತರು ಬಿಸಿಲ ಝಳವನ್ನು ಲೆಕ್ಕಿಸದೆ, ಜಯಘೋಷ ಹಾಕುತ್ತಿದ್ದರು.
ವೇದಿಕೆಯಲ್ಲಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕೆ.ಎಚ್.ಮುನಿಯಪ್ಪ, ಉಗ್ರಪ್ಪ, ಮೋಟಮ್ಮ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.