ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ದೇಶದ ಅಟಾರ್ನಿ ಜನರಲ್ ಇದ್ದಂತೆ. ಅವರದ್ದು ಸುಪ್ರೀಂ ಪವರ್. ರೆಡ್ಡಿ ಹೇಳಿದಂತೆಯೇ ಎಲ್ಲವೂ ನಡೆಯುತ್ತದೆ..! ಎಂದು ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತರು ವರದಿ ಸಲ್ಲಿಸಿದರೆ ಶಾಸಕ ಸಂತೋಷ್ ಲಾಡ್, ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಹಾಗೂ ಮಾಜಿ ಶಾಸಕ ಗವಿಯಪ್ಪ ಅವರ ಕೈಗೆ ಕೋಳ ತೊಡಿಸಿ ಬಳ್ಳಾರಿಯಿಂದ ಬೆಂಗಳೂರುವರೆಗೆ ಮೆರವಣಿಗೆ ನಡೆಸುವ ಸಾಧ್ಯತೆಯಿದೆ ಎಂದು ಜನಾರ್ದನ ರೆಡ್ಡಿ ಹೇಳಿರುವ ಹಿನ್ನೆಲೆಯಲ್ಲಿ ಲಾಡ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ದೇವೇಗೌಡರನ್ನು ರೆಡ್ಡಿ ಟೀಕಿಸುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಂಸ ಎಂದು ಲೇವಡಿ ಮಾಡುತ್ತಾರೆ. ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ಸಿಗರಿಗೆ ಸವಾಲು ಹಾಕುತ್ತಾರೆ. ಮುಂದಿನ ದಿನಗಳಲ್ಲಿ ಅವರು ಬಿಜೆಪಿಯ ವರಿಷ್ಠ ನಾಯಕ ಅಡ್ವಾಣಿ ಅವರಿಗೂ ಕ್ಯಾರೆ ಎನ್ನಬಹುದು ಎಂದರು.
ರೆಡ್ಡಿಯವರು ಬಿಜೆಪಿಯಲ್ಲಿ ಬಹಳ ಪ್ರಭಾವಿ ವ್ಯಕ್ತಿ. ಅವರ ಹೇಳಿಕೆಯನ್ನು ನಾನು ಖಂಡಿತವಾಗಿಯೂ ಸ್ವಾಗತಿಸುತ್ತೇನೆ. ನಾನು 24 ಕ್ಯಾರೆಟ್ ಚಿನ್ನ ಎಂದು ಸಚಿವರೇ ಹೇಳಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದಾದರೆ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ರೆಡ್ಡಿಯವರೇಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.