ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲವೆಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇಲ್ಲಿನ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಜೆಡಿಎಸ್ ಘಟಕ ಆಯೋಜಿಸಿದ್ದ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸದಸ್ಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಳೆದೆರೆಡು ವರ್ಷಗಳಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಜೆಡಿಎಸ್ ವಿಧಾನಸಭೆಯಲ್ಲಿ ಹೋರಾಟ ನಡೆಸುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಕಾಂಗ್ರೆಸ್ ನಾಯಕರು ಈಗ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿದ್ದಾರೆ. ಇವರಿಗೆ ಅಕ್ರಮ ಗಣಿಗಾರಿಕೆ ತಡೆಯುವ ಮನಸ್ಸಿದ್ದರೆ ಬಳ್ಳಾರಿಗೆ ಪಾದಯಾತ್ರೆ ಮಾಡುವ ಬದಲು ದೆಹಲಿಗೆ ತೆರಳಿ ಪ್ರಧಾನಮಂತ್ರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೆ ಸಿಬಿಐ ತನಿಖೆ ಕೈಗೊಳ್ಳುತ್ತಿದ್ದರು. ರೆಡ್ಡಿ ಸೋದರರು ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಾರಣ ಎಂದರು.
'ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆ ಪರವಾಗಿಲ್ಲ. ರೆಡ್ಡಿ ಸೋದರರು ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂದು ಹೇಳಿದ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಗೊಂಡಿದ್ದು ಇದರಿಂದ ರಾಜ್ಯದ ಜನತೆಗೆ ಯಾವುದೇ ಅನುಕೂಲವಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣವಲ್ಲ. ಕಾಂಗ್ರೆಸ್‌ನ ಕೀಳುಮಟ್ಟದ ರಾಜಕೀಯದಿಂದ ಅಧಿಕಾರ ಲಭಿಸಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯದ ಸಂದರ್ಭದಲ್ಲಿ 6 ಜನ ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾರಣ. ಜನಾರ್ದನ ರೆಡ್ಡಿ ನನ್ನ ವಿರುದ್ಧ 150 ಕೋಟಿ ರೂ. ಗಣಿ ಲಂಚದ ಆಪಾದನೆ ಮಾಡಲು ಸಹ ಇವರೇ ಕಾರಣ. ಬಿಜೆಪಿ ಸರಕಾರದೊಂದಿಗೆ ಕಾಂಗ್ರೆಸ್ ಮುಖಂಡರು ಅಪವಿತ್ರ ಮೈತ್ರಿ ಹೊಂದಿದ್ದು ಮುಕ್ತವಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗುತ್ತಿದ್ದಾರೆ. ಬಿಜೆಪಿ ಸರಕಾರವನ್ನು ಅಧಿಕಾರದಿಂದ ತೊಲಗಿಸಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ. ರಾಜ್ಯದ ಜನತೆ ಬೆಂಬಲದೊಂದಿಗೆ ಜೆಡಿಎಸ್ ಪಕ್ಷ ತೊಲಗಿಸಲಿದೆ ಎಂದರು.