ಕಾಂಗ್ರೆಸ್ಸಿಗರ ಬಳ್ಳಾರಿ ಪಾದಯಾತ್ರೆ ಸಂಪೂರ್ಣ ವಿಫಲವಾಗಿದ್ದು, ಅದೊಂದು 'ಪ್ಲಾಫ್ ಶೋ' ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಸಚಿವ ಜನಾರ್ದನ ರೆಡ್ಡಿ ಗೃಹ ಕಚೇರಿ ಕುಟೀರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಾದಯಾತ್ರೆ ಹಾಗೂ ಸಮಾವೇಶದಿಂದ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ ಇವರು ದಾರಿಯುದ್ದಕ್ಕೂ ಮಾಡಿದ ಬ್ರೇಕ್ ಡ್ಯಾನ್ಸ್‌ನಿಂದ ರಾಜ್ಯದ ಜನತೆಗೆ ಒಳ್ಳೇ ಮನೋರಂಜನೆ ಸಿಕ್ಕಿತು. ಕಳೆದ 50 ವರ್ಷಗಳಿಂದ ಬೆಳೆಸಿಕೊಂಡಿದ್ದ ಕಾಂಗ್ರೆಸ್ಸಿಗರ ಬೊಜ್ಜು ಕರಗಿತು ಎಂದು ವ್ಯಂಗ್ಯವಾಡಿದರು.
ನಮ್ಮ ಪುಣ್ಯಕ್ಕೆ ಕಾಂಗ್ರೆಸ್ ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆ ಜರುಗಲಿಲ್ಲ. ನಮ್ಮ ಜಿಲ್ಲೆಯ ಜನರು ಶಾಂತಿಪ್ರಿಯರು. ಅವರಿಗೆ ಮೊದಲು ನಾನು ಧನ್ಯವಾದ ತಿಳಿಸಬೇಕು ಎಂದರಲ್ಲದೆ, ಜಿಲ್ಲೆಯ ಜನತೆ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ ಎಂದರು. ಕಾಂಗ್ರೆಸ್‌ನವರು ಪಾದಯಾತ್ರೆ ಹಾಗೂ ಸಮಾವೇಶಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ಬಂತು ? ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ ಶ್ರೀರಾಮುಲು, ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡಿ ಹೋದರು ಎಂದು ಟೀಕಿಸಿದರು.
ಸಿದ್ದರಾಮಯ್ಯ ಕಿತ್ತು ಹೋದ ಎಂಜಿನ್ ಇದ್ದ ಹಾಗೆ. ಪ್ರತಿಪಕ್ಷ ನಾಯಕನ ಸ್ಥಾನವನ್ನು ಉಳಿಸಿಕೊಳ್ಳಲು ಬಳ್ಳಾರಿಗೆ ಬಂದು ಡ್ರಾಮಾ ಮಾಡಿದರು ಎಂದು ಟೀಕಿಸಿದರು. ನಮ್ಮನ್ನು ಬಳ್ಳಾರಿ ಜಾಲಿಗೆ ಹೋಲಿಸಿದ್ದಾರೆ. ಜಾಲಿ ಕೂಡ ನೆರಳು ನೀಡಬಲ್ಲದು. ಆದರೆ, ನಾವು ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗಿಡವನ್ನು ಬುಡ ಸಮೇತ ಕಿತ್ತು ಹಾಕಿದ್ದೇವೆ. ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಬಾಯಿಗೆ ಬಂದಂತೆ ಮಾತನಾಡಿದರು. ಇಬ್ರಾಹಿಂ ಚಲಾವಣೆ ಇಲ್ಲದ ನಾಣ್ಯ ಎಂದರು.