ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜನಾರ್ದನ ರೆಡ್ಡಿಗೆ ಮತಿಭ್ರಮಣೆಯಾಗಿದೆ: ದಿವಾಕರ ಬಾಬು (Divakar babu | Janardana Reddy | Congress | UPA | BJP)
Bookmark and Share Feedback Print
 
ಕಾಂಗ್ರೆಸ್ ಸಮಾವೇಶದ ಯಶಸ್ಸಿನಿಂದ ಕಂಗಾಲಾಗಿ ನಾಯಕರ ಬಗ್ಗೆ ಟೀಕೆ ಮಾಡುತ್ತಿರುವ ಸಚಿವ ಜನಾರ್ದನ ರೆಡ್ಡಿಗೆ ಮತಿಭ್ರಮಣೆಯಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ದಿವಾಕರಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಳೆಗಾರಿಕೆ, ಸರ್ವಾಧಿಕಾರಿ ನೀತಿ, ಹಣ, ಅಧಿಕಾರ ಮದದ ರೆಡ್ಡಿಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ತಮ್ಮ ವಿರುದ್ಧ ಯಾರೇ ಟೀಕೆ ಮಾಡಿದರೂ ಅಂತವರಿಗೆಲ್ಲ ತಲೆ ಸರಿಯಾಗಿಲ್ಲ ಎಂದು ಹೇಳುವ ಸಚಿವ ಜನಾರ್ದನರೆಡ್ಡಿಗೆ ನಿಜವಾಗಲೂ ಮತಿಭ್ರಮಣೆಯಾದಂತಿದೆ ಎಂದರು.

ಬಳ್ಳಾರಿ ವಿಧಾನಸಭೆ ಕ್ಷೇತ್ರದಲ್ಲಿ ಜನತಾಪರಿವಾರದ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಎಂ.ಪಿ.ಪ್ರಕಾಶ್ ಕೈ ಕಾಲು ಹಿಡಿದ ಈ ಜನ ಪ್ರಕಾಶ್ ವಿರುದ್ಧವೇ ಮಾತನಾಡುತ್ತಿದ್ದಾರೆ. ನಾಚಿಕೆ, ಮಾನ ಇದ್ದರೆ ಪ್ರಜಾಪ್ರಭುತ್ವದ ರೀತಿ ಉತ್ತರ ನೀಡಬೇಕಾಗಿತ್ತು ಎಂದು ಹರಿಹಾಯ್ದರು.

ಲೂಟಿಕೋರ ಮಕ್ಕಳಿಗೆ ರಕ್ಷಣೆ, ಮಕ್ಕಳ ಹಣ, ಅಧಿಕಾರ ಮದಕ್ಕೆ ಇನ್ನಷ್ಟು ಕುಮ್ಮಕ್ಕು ನೀಡಲು ತಾಯಿ ಸುಷ್ಮಾ ಬಳ್ಳಾರಿಗೆ ಬರುತ್ತಾರೆ ಎಂದು ಟೀಕಿಸಿದ ದಿವಾಕರಬಾಬು, ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಕಾಣಿಕೆ ಪಡೆಯಲು ಆಗಮಿಸುವ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಮಾಡಿದ್ದೇನು? ಎಂದು ಪ್ರಶ್ನಿಸಿದರು.

ಪ್ರವಾಹದಿಂದ ನಿರಾಶ್ರಿತರಾಗಿ ಒಂದು ವರ್ಷವಾದರೂ ಸಂತ್ರಸ್ತರಿಗೆ ಮನೆ ನಿರ್ಮಿಸಿಲ್ಲ, ಬಡವರಿಗೆ ಆಶ್ರಯ ಮನೆ ಇಲ್ಲ, ಪಡಿತರ ಚೀಟಿ ವಿತರಣೆ ಸಮರ್ಪಕವಾಗಿಲ್ಲ, ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯಗಳು ಸಮರ್ಪಕವಾಗಿಲ್ಲ ಎಂದು ದೂರಿದರು.

ಸಂದರ್ಭ ಸಿಕ್ಕಾಗೆಲ್ಲ ಗೂಂಡಾ, ಕೊಲೆಗಡುಕ ಕುಟುಂಬ ಎಂದು ಟೀಕಿಸುವ ಸಚಿವ ಜನಾರ್ದನ ರೆಡ್ಡಿ ಮತ್ತು ಅವರ ಸಂಗಡಿಗರ ಜಾತಕ ಬಲ್ಲೆ, ಯಾರು ಎಷ್ಟು ಕೊಲೆ ಮಾಡಿದ್ದಾರೆ, ಗೂಂಡಾಗಿರಿ ನಡೆಸಿದ್ದಾರೆ ಎನ್ನುವುದನ್ನು ಹೇಳಲಿ. ಸಮಯ ಬಂದಾಗ ಈ ಬಗ್ಗೆ ನಾನೂ ಹೇಳುತ್ತೇನೆ ಎಂದು ಸವಾಲೆಸೆದರು.

ಇನ್ನೊಬ್ಬರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿ ಹದ್ದುಬಸ್ತಿನಲ್ಲಿಡುವ ಆಟ ಬಹಳ ದಿನ ನಡೆಯದು. ನಿಮ್ಮ ಸಂಪಾದನೆ ಹೇಗೆ, ಏನು ಎಂಬುದು ಜನತೆಗೆ ಗೊತ್ತಿದೆ. ನಿಮ್ಮಷ್ಟಕ್ಕೆ ನೀವೇ ಪ್ರಾಮಾಣಿಕರು ಎಂದುಕೊಂಡರೆ ಮುಗಿಯುವುದಿಲ್ಲ. ಜನ ನಿಮ್ಮನ್ನು ಪ್ರಾಮಾಣಿಕರು ಎಂದು ಕರೆದರೆ ಮಾತ್ರ ಬೆಲೆ ಎಂದರು.

ಅಕ್ರಮ ಗಣಿಗಾರಿಕೆ, ಗಡಿ ಒತ್ತುವರಿಗೆ ಸಂಬಂಧಿಸಿ ಸರ್ವೋಚ್ಚ ನ್ಯಾಯಾಲಯ ಇನ್ನೂ ತೀರ್ಪು ಪ್ರಕಟಿಸಿಲ್ಲ, ಆದರೆ ಸಚಿವ ಜನಾರ್ದನರೆಡ್ಡಿ ಮಾತ್ರ ನ್ಯಾಯಾಲಯದಿಂದ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಹೇಳುತ್ತ ತಿರುಗುತ್ತಿದ್ದಾರೆ. ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಗಣಿಗಾರಿಕೆ ನಡೆಸಬಾರದು ಎಂದು ಕೋರ್ಟ್ ಸೂಚನೆ ನೀಡಿದೆ. ಸಚಿವ ಜನಾರ್ದನ ರೆಡ್ಡಿಗೆ ಕೋರ್ಟ್ ಬಗ್ಗೆ ಗೌರವ ಇಲ್ಲ. ಸುಗ್ಗಲಮ್ಮ ದೇವಸ್ಥಾನ ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಂಡೂರು ನ್ಯಾಯಾಲಯ 8 ಬಾರಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಕಿಡಿಕಾರಿದರು.

ಬಳ್ಳಾರಿ ಅಭಿವೃದ್ಧಿ ಹೆಸರಿನಲ್ಲಿ ಕೇಂದ್ರದ ಅನುದಾನ ಲೂಟಿ ಹೊಡೆಯುತ್ತಿರುವ ಸಚಿವ ಜನಾರ್ದನ ರೆಡ್ಡಿ ಮತ್ತು ಸಂಗಡಿಗರು, ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಗೆ ಮಾಡಿದ್ದೇನೂ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತಾವಧಿಯಲ್ಲಿ ಯಾರು ಏನು ಮಾಡಿದ್ದಾರೆ ಎಂಬುದು ಬಹಿರಂಗವಾಗಿ ಚರ್ಚೆಯಾಗಲಿ ಎಂದು ಸವಾಲು ಹಾಕಿದರು.

ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಬಳ್ಳಾರಿಯ ದುರ್ಗಮ್ಮ ಗುಡಿಯಿಂದ ರಾಯಲ್ ಸರ್ಕಲ್ವರೆಗಿನ ಅರ್ಧ ಕಿ.ಮೀ. ರಸ್ತೆ ಅಭಿವೃದ್ದಿಗೆ 9.5 ಕೋಟಿ ರೂ. ಖರ್ಚು ತೋರಿಸಲಾಗಿದೆ. ರಾಷ್ಟ್ತ್ರೀಯ ಹೆದ್ದಾರಿ ನಿರ್ಮಾಣದಲ್ಲೂ ಈ ಪರಿ ಭ್ರಷ್ಟಾಚಾರ ಇಲ್ಲ. ಜಿಲ್ಲೆಯ ಹಲವಾರು ಕಾಮಗಾರಿಗಳಲ್ಲಿ ಲೂಟಿಕೋರರ ದರ್ಬಾರ್ ಇದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ