ರಾಜ್ಯ ಸರಕಾರ ಜಾರಿಗೊಳಿಸಲು ಯತ್ನಿಸುತ್ತಿರುವ ಗೋಹತ್ಯಾ ವಿಧೇಯಕವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಪ್ರತಿಪಕ್ಷಗಳು ಗೋವಿನ ಶಾಪದಿಂದ ನಿರ್ನಾಮವಾಗುವ ಸ್ಥಿತಿಗೆ ತಲುಪಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಗೋಹತ್ಯೆ ನಿಷೇಧ ಕಾನೂನಿಗೆ ಒಪ್ಪಿಗೆ ಸೂಚಿಸುವಂತೆ ಒತ್ತಾಯಿಸಿ ಬಿಜೆಪಿ ಶಿವಮೊಗ್ಗದಲ್ಲಿ ನಡೆಸಿದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಭಾಷಣದುದ್ದಕ್ಕೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದಾರೆ. ಅದೇ ಕಾರಣದಿಂದ ಅವರು ಗೋಹತ್ಯೆ ವಿಧೇಯಕಕ್ಕೆ ಅಂಕಿತ ಹಾಕುವ ಬದಲು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಕಾನೂನಿಗೆ ಅಂಕಿತ ಹಾಕುವವರೆಗೂ ನಾವು ಹೋರಾಟವನ್ನು ಕೈ ಬಿಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಈಶ್ವರಪ್ಪ ಸ್ಪಷ್ಟಪಡಿಸಿದರು.
ಗೋ ಮಾತೆಯ ವಿಚಾರದಲ್ಲಿಯೇ ಪ್ರಸಕ್ತ ನಡೆಯಲಿರುವ ಕಡೂರು ಮತ್ತು ಗುಲ್ಬರ್ಗಾ ವಿಧಾನಸಭಾ ಉಪ ಚುನಾವಣೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಮಣ್ಣು ಮುಕ್ಕಲಿವೆ. ಅಷ್ಟಾದ ಮೇಲೂ ಬುದ್ಧಿ ಎಂಬುದು ಅವರಿಗಿದ್ದರೆ, ಗೋ ಹತ್ಯಾ ನಿಷೇಧ ಕಾಯ್ದೆಗೆ ಅಂಕಿತ ಹಾಕುವಂತೆ ರಾಜ್ಯಪಾಲರನ್ನು ಒತ್ತಾಯಿಸಲಿ. ತಪ್ಪಿದಲ್ಲಿ ವಿಪಕ್ಷಗಳು ವಿಳಾಸ ಕಳೆದುಕೊಳ್ಳಲಿವೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಪೂಜ್ಯ ಧಾರ್ಮಿಕ ಕೇಂದ್ರಗಳೆಂದರೆ ಮಠ-ಮಂದಿರ-ದೇವಸ್ಥಾನಗಳು. ಈ ನಿಟ್ಟಿನಲ್ಲಿ ಎಲ್ಲಾ ಮಠಾಧೀಶರುಗಳು, ಸ್ವಾಮೀಜಿಗಳು ಗೋ ಹತ್ಯೆ ನಿಷೇಧ ಕಾನೂನನ್ನು ಬೆಂಬಲಿಸುವ ಅಗತ್ಯವಿದೆ. ಅಲ್ಲದೆ ಕಾನೂನನ್ನು ವಿರೋಧಿಸುವವರಿಗೆ ಮಠ-ಮಂದಿರಗಳಲ್ಲಿ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಬೇಕು ಎಂದರು.
ತಿಕ್ಕಲು ರಾಜ್ಯಪಾಲ... ಹೀಗೆಂದು ಲೇವಡಿ ಮಾಡಿರುವುದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್. ರಾಜ್ಯಪಾಲರು ಹೇಗಿರಬೇಕಿತ್ತೋ, ಹಾಗೆ ನಮ್ಮ ರಾಜ್ಯಪಾಲರು ಕಾರ್ಯ ನಿರ್ವಹಿಸುತ್ತಿಲ್ಲ. ಆ ಮನುಷ್ಯನಿಗೆ ಸ್ವಲ್ಪ ತಿಕ್ಕಲುತನವಿದೆ. ಎಲ್ಲೆಲ್ಲಿ ಏನೇನು ಮಾಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಎಲ್ಲೆಲ್ಲೋ ನಿಂತು ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಬಯ್ಯುವುದು, ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯದ ಬಗ್ಗೆ ಟೀಕಿಸುವುದು, ಕರ್ನಾಟಕ ಅಳಿದೇ ಹೋಗಿದೆ ಎಂಬಂತೆ ಮತ್ತು ಅದನ್ನು ನಾನೇ ತಡೆಯುತ್ತೇನೆ ಎಂಬ ಹುಂಬ ಹೇಳಿಕೆಗಳನ್ನು ನೀಡುವುದು, ಇನ್ನೊಂದು ಕಡೆ ನಾನು ಕಾಂಗ್ರೆಸ್‌ನ ಹೆಮ್ಮೆಯ ಪುತ್ರ ಎಂದು ಹೇಳಿಕೊಳ್ಳುತ್ತಿರುವುದನ್ನು ರಾಜ್ಯಪಾಲರು ಮಾಡುತ್ತಾ ಬಂದಿದ್ದಾರೆ ಎಂದರು.