ಗೌರಿಬಿದನೂರು, ಭಾನುವಾರ, 5 ಸೆಪ್ಟೆಂಬರ್ 2010( 14:33 IST )
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಸೆ.15 ರಂದು ನಡೆಯಲಿರುವ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ತ್ರೀಯ ಕೌಶಲ ಅಭಿವೃದ್ದಿ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 11ಹಾಗೂ 12ನೇ ಹಣಕಾಸು ಆಯೋಗದ ಅನುದಾನದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಕೌಶಲ್ಯ ಅಭಿವೃದ್ದಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಈ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆ ಮತ್ತು ಕಾರ್ಯಕ್ರಮಗಳ ಕುರಿತು ಸಣ್ಣ ಮತ್ತು ಮಧ್ಯಮ ವರ್ಗದ ಜನರಲ್ಲಿ ಅರಿವು ಮೂಡಿಸುವ 82 ದಿನಗಳ ಕಾರ್ಯಾಗಾರಕ್ಕೆ ಇದೇ ದಿನ ಚಾಲನೆ ನೀಡಲಾಗುವುದು. ಹೈದರಾಬಾದ್ ಮೂಲದ ಸಂಸ್ಥೆ ನಿರುದ್ಯೋಗಿ ಯುವಕ - ಯುವತಿಯರಿಗೆ ತರಬೇತಿ ನೀಡಲಿದೆ. 180 ಮಂದಿ ತರಬೇತುದಾರರು ತರಬೇತಿ ನೀಡಲಿದ್ದಾರೆ. ಕೆನರಾ ಬ್ಯಾಂಕಿನಿಂದ ನಿರ್ಮಿಸಲು ಉದ್ದೇಶಿಸಿರುವ ಅಕಾಡೆಮಿ ಆಫ್ ರುಡ್ಸೆಟ್ ಕೇಂದ್ರಕ್ಕೆ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸುವುದರ ಜತೆಗೆ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಬಿಪಿಒಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆ ಪ್ರಗತಿಯಲ್ಲಿದ್ದು, ಗೌರಿಬಿದನೂರಿನಿಂದಲೇ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಅವರು, ಆಂಧ್ರ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ಜಗನ್ ಮೋಹನ್ ರೆಡ್ಡಿ ನಡೆಸುತ್ತಿರುವ ಓದಾರ್ಪು ಯಾತ್ರೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಯಾತ್ರೆಗೆ ಅನುಮತಿ ನೀಡುವ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.