ರಾಷ್ಟ್ರದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವ ನಿರ್ಮಿಸುವಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ಮಹತ್ವದ ಪಾತ್ರ ವಹಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎನ್.ಬಚ್ಚೇಗೌಡ ಹಾರೈಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಕಾಮನ್ವೆಲ್ತ್ ಕ್ವೀನ್ಸ್ ಬ್ಯಾಟನ್ ಕ್ರೀಡಾಜ್ಯೋತಿ ಸ್ವಾಗತಿಸುವ ಸಲುವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕಾಮನ್ವೆಲ್ತ್ ಕ್ರೀಡಾಕೂಟ ದಿಲ್ಲಿಯಲ್ಲಿ ನಡೆಯುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದರು.
ಕ್ರೀಡೆಯನ್ನು ಪ್ರೋತ್ಸಾಹಿಸಲು ರಿಲೇ ನಡೆಸಲಾಗುತ್ತಿದೆ. ಕ್ರೀಡೆಗೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಮೂರು ದಿನಗಳ ಹಿಂದೆ ತಮಿಳುನಾಡು ಗಡಿಯಿಂದ ರಾಜ್ಯಕ್ಕೆ ಪ್ರವೇಶಿಸಿರುವ ಬ್ಯಾಟನ್ ರಿಲೇ ಮೈಸೂರು, ಬೆಂಗಳೂರು ಮಾರ್ಗದಲ್ಲಿ ಸಂಚರಿಸಿ ಹಾಸನಕ್ಕೆ ಬಂದಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮೂಲಕ ದಿಲ್ಲಿಯತ್ತ ಪ್ರಯಾಣ ಬೆಳೆಸಲಿದೆ ಎಂದು ವಿವರಿಸಿದರು.
ಹಾಸನಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಟನ್ ರಿಲೇ ತಲುಪಿದಾಗ 1,87,350 ಕಿ.ಮೀ. ದೂರ ಕ್ರಮಿಸಿದಂತಾಗಿದೆ. ಬ್ರಿಟನ್ ಮಹಾರಾಣಿ ಅವರ ಹಸ್ತಾಕ್ಷರದಿಂದ ಬರೆದಿರುವ ಸಂದೇಶ ಹೊತ್ತು ಬಂದಿರುವ ಈ ರಿಲೇ ಈಗಾಗಲೇ ಏಷ್ಯಾ, ಯೂರೋಪ್, ಆಸ್ಟ್ತ್ರೇಲಿಯಾ, ಆಫ್ರಿಕಾ ಖಂಡಗಳಲ್ಲಿ 340 ದಿನಗಳ ಸಂಚರಿಸಿ ಪಾಕಿಸ್ತಾನದಿಂದ ವಾಘಾ ಗಡಿ ಮೂಲಕ ದೇಶಕ್ಕೆ ಬಂದಿದೆ. 28 ರಾಜ್ಯಗಳ ಮುಖ್ಯ ನಗರಗಳಲ್ಲಿ ಸಂಚರಿಸುತ್ತಿರುವ ಈ ರಿಲೇಯನ್ನು 5 ಸಾವಿರ ಕ್ರೀಡಾಪಟುಗಳು ಹೊತ್ತು ಓಡುತ್ತಿದ್ದಾರೆ ಎಂದರು.