ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಎಂದಿನ ರಾಜಕೀಯ ಹಗೆತನ, ದ್ವೇಷದ ಪ್ರವೃತ್ತಿ ಮುಂದುವರಿಸಿದ್ದಾರೆ ಎಂದು ಕೇಂದ್ರದ ಮಾಜಿ ಮಂತ್ರಿ, ಜೆಡಿಎಸ್ ನಾಯಕ ಬಸವರಾಜ ಪಾಟೀಲ ಯತ್ನಾಳ ಕಿಡಿಕಾರಿದರು.
ಮುಖ್ಯಮಂತ್ರಿಯವರ ರಾಜಕೀಯ ಹಗೆತನಕ್ಕೆ ಮಲ್ಲಿಕಾರ್ಜುನಯ್ಯ, ಬಿ.ಬಿ. ಶಿವಪ್ಪ, ಬಸವರಾಜ ಪಾಟೀಲ ಸೇಡಂ ಹಾಗೂ ತಾವು ಬಲಿಯಾಗಿದ್ದು, ಈಗ ಇಂಥದ್ದೇ ಮತ್ತೊಂದು ತಾಜಾ ಉದಾಹರಣೆ ರೇವೂರ ಕುಟುಂಬ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಯಾರ ಬೆಳವಣಿಗೆಯನ್ನೂ ಸಹಿಸದ ಅವರು ಚಂದ್ರಶೇಖರ ಪಾಟೀಲ ರೇವೂರ ಕುಟುಂಬಕ್ಕೆ ಟಿಕೆಟ್ ನೀಡದೇ ವಂಚಿಸಿದ್ದಾರೆ ಎಂದು ದೂರಿದರು.
ರಾಜಕೀಯ ದ್ವೇಷ ಪ್ರವೃತ್ತಿಯೊಂದಿಗೆ ಈಗ ಬ್ಯಾಕ್‌ಮೇಲ್ ಸಂಸ್ಕ್ಕತಿಯನ್ನೂ ಮುಖ್ಯಮಂತ್ರಿ ಮೈಗೂಡಿಸಿಕೊಂಡಿದ್ದಾರೆ. ಬಿಜೆಪಿಗೆ ಬೆಂಬಲಿಸಿ, ನಿಮ್ಮ ಕ್ಷೇತ್ರ ದತ್ತು ಪಡೆದು ಅಭಿವೃದ್ದಿ ಮಾಡುವುದಾಗಿ ಹೇಳುತ್ತಾರೆ. ಕಡೂರು ಕ್ಷೇತ್ರದಲ್ಲೂ ಇಂಥ ಹೇಳಿಕೆ ನೀಡಿದ್ದು, ತಿಂಗಳಿಗೊಮ್ಮೆ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಅಭಿವೃದ್ದಿ ಪರ ಪ್ರಾಮಾಣಿಕವಾಗಿ ಕೆಲಸ ಮಾಡುವ ಒಬ್ಬ ಮುಖ್ಯಮಂತ್ರಿಗೆ ಒಂದೇ ಕ್ಷೇತ್ರಕ್ಕೆ ತಿಂಗಳಿಗೊಮ್ಮ್ಮೆ ಭೇಟಿ ನೀಡುವಷ್ಟು ಸಮಯಾವಕಾಶವಿರುವುದೇ ಎಂದು ಯೋಚಿಸಿ ಹೇಳಿಕೆ ನೀಡಬೇಕೆಂಬ ಸಾಮಾನ್ಯ ಜ್ಞಾನವೂ ಯಡಿಯೂರಪ್ಪನವರಿಗಿಲ್ಲ ಎಂದ ಅವರು, ಇವರೊಬ್ಬ ಸದಾ ಸುತ್ತುವ ಮುಖ್ಯಮಂತ್ರಿ ಎಂತಲೂ ಲೇವಡಿ ಮಾಡಿದರು.
ಆದಿ ಬಣಜಿಗರನ್ನು ಪ್ರವರ್ಗ ಎ ವರ್ಗಕ್ಕೆ ಸೇರಿಸುವ ಮುಖ್ಯಮಂತ್ರಿಯವರ ಹೇಳಿಕೆ ಚುನಾವಣೆ ರಾಜಕೀಯ ಎಂದು ಟೀಕಿಸಿದ ಯತ್ನಾಳ, ಚುನಾವಣೆಯಲ್ಲಿ ವೀರಶೈವ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.