ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳ ಅಭಿಪ್ರಾಯಗಳಿಗೆ ಕಿಮ್ಮತ್ತಿನ ಬೆಲೆ ಕೊಡದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಧುನಿಕ ಹಿಟ್ಲರ್ ವರ್ತನೆ ತೋರಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಪ್ರತಿಪಕ್ಷಗಳು ಒದಗಿಸುವ ದಾಖಲೆ ಪತ್ರಗಳನ್ನು ಪರಿಶೀಲಿಸ ಮುಖ್ಯಮಂತ್ರಿಯವರದ್ದು ಹಿಟ್ಲರ್ ವರ್ತನೆ. ನಮ್ಮ ಟೀಕೆಗಳನ್ನು ಸಹಿಸದೆ ಹಿಟ್ಲರ್ ತನ್ನ ಅವಧಿಯಲ್ಲಿ ಸುಳ್ಳು ಹೇಳುತ್ತಾ ಅಸತ್ಯವನ್ನು ಪುನರುಚ್ಛರಿಸುತ್ತಾ ಬಂದಿದ್ದಾರೆ ಎಂದರು.
ಹಿಟ್ಲರನ ಗೊಬೆಲ್ ತಂತ್ರ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲೂ ಕಾಣಿಸುತ್ತಿದೆ. 10 ಬಾರಿ ಹೇಳುವ ಸುಳ್ಳನ್ನು ಜನ ಸಂತ್ಯವೆಂದು ನಂಬುತ್ತಾರೆ ಎನ್ನುವುದು ಅವರ ಭಾವನೆ. ಇದು ಹಿಟ್ಲರ್ ತಂತ್ರವಲ್ಲದೆ ಮತ್ತೇನು ಎಂದು ಪ್ರಶ್ನಿಸಿರುವ ಉಗ್ರಪ್ಪ, ನಮ್ಮ ಆರೋಪಗಳನ್ನು ಹಿಟ್ ಅಂಡ್ ರನ್‌ಗೆ ಹೋಲಿಸುವ ಸಿಎಂ ಇದೀಗ ಕೇಂದ್ರ ಸಚಿವರ ಬಗ್ಗೆ ಮಾಡಿದ್ದೇನು ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನೆಸೆದರು.
ಮುಖ್ಯಮಂತ್ರಿಗಳು ಬರಿ ಹೇಳಿಕೆಗಳನ್ನು ನೀಡುತ್ತಾ ಬರುವ ಬದಲು ದಾಖಲೆಗಳನ್ನು ಬಹಿರಂಗಗೊಳಿಸಲಿ. ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಮುಖಂಡರ ವಿವರಗಳನ್ನು ಬಹಿರಂಗಪಡಿಸಲಿ. ಲಂಚ ಪಡೆದ ಕೇಂದ್ರ ಸಚಿವರು ಯಾರೆಂದು ದಾಖಲೆ ಸಹಿತ ರುಜುವಾತುಪಡಿಸಲಿ ಎಂದೂ ಅವರು ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿಯವರಿಗೆ ಅಕ್ರಮ ಎಸಗಿದವರ ಮಾಹಿತಿ ಇದ್ದದ್ದೇ ಆದಲ್ಲಿ ಅದನ್ನು ಬಚ್ಚಿಡುವುದು ಐಪಿಸಿ ಸೆಕ್ಷನ್ 203ರ ಪ್ರಕಾರ ಶಿಕ್ಷಾರ್ಹ ಅಪರಾಧ. ಅದನ್ನು ಅವರು ಹೊರ ಹಾಕಲೇ ಬೇಕು ಎಂದು ಉಗ್ರಪ್ಪನವರು ಯಡಿಯೂರಪ್ಪನವರನ್ನು ಒತ್ತಾಯಿಸಿದ್ದಾರೆ.
ಇದೇ ಹೊತ್ತಿಗೆ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ವಿರುದ್ಧವೂ ಉಗ್ರಪ್ಪ ಹಲವು ಆರೋಪಗಳನ್ನು ಮಾಡಿದರು.
2005ರ ಏಪ್ರಿಲ್ ತಿಂಗಳಿನಿಂದ ಕಳೆದ ಮೇ ತಿಂಗಳಿನವರೆಗೆ ರೆಡ್ಡಿಯವರ ಪತ್ನಿ ಲಕ್ಷ್ಮಿ ಅರುಣ ಅವರ ಹೆಸರಿನಲ್ಲಿರುವ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯು ಮಾಡಿರುವ ಅದಿರು ರಫ್ತು ವಹಿವಾಟಿನ ಮೊತ್ತ 231,66,60,772 ರೂಪಾಯಿಗಳು ಎಂದು ಉಗ್ರಪ್ಪ ದಾಖಲೆ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಗಣಿಗಾರಿಕೆ ನಡೆಸುತ್ತಿಲ್ಲ ಎನ್ನುವ ಸಚಿವರ ಮಾತು ನಿಜವೇ ಆಗಿದ್ದರೆ ಇಷ್ಟೊಂದು ಮೊತ್ತದ ವಹಿವಾಟು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿರುವ ಉಗ್ರಪ್ಪ, ಇದು ಹಫ್ತಾ ವಸೂಲಿಯೇ ಅಥವಾ ಬೇನಾಮಿ ಹೆಸರಿನ ಗಣಿಗಾರಿಕೆಯೇ ಎಂದು ಪ್ರಶ್ನಿಸಿದರು.