ರಾಜ್ಯ ಸರಕಾರ ಸಾಲದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದೆ: ಸಿದ್ದರಾಮಯ್ಯ
ಗುಲ್ಬರ್ಗ, ಸೋಮವಾರ, 6 ಸೆಪ್ಟೆಂಬರ್ 2010( 15:36 IST )
ಒಂದೆಡೆ ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ. ಇನ್ನೊಂದೆಡೆ ಸಾಲದ ಮೊತ್ತ ಹೆಚ್ಚುತ್ತಲೇ ಇದ್ದು, ಬಿಜೆಪಿ ಸರಕಾರ ಸಾಲದ ಸುಳಿಗೆ ಸಿಲುಕಿ ನಲುಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ ಬಾಕಿ ಇರುವ 1, 700 ಕೋಟಿ ರೂ. ಬಿಲ್ ಪಾವತಿಸುವುದು ಈ ಸರಕಾರದಿಂದ ಸಾಧ್ಯವಾಗಿಲ್ಲ. 2004-05ರಲ್ಲಿ 40 ಸಾವಿರ ಕೋಟಿ ರೂ. ಸಾಲ ಇದ್ದರೆ, 2008-09ರಲ್ಲಿ ಅದು 84 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಸಾಲದ ಹೊರೆಯಿಂದ ಹೊರಬರಲು ಸಾಧ್ಯವಾಗದ ಈ ಸರಕಾರ ಖಜಾನೆ ಭರ್ತಿಯಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.
ಹಣಕಾಸು ನಿರ್ವಹಣೆಯಲ್ಲಿ ಸರಕಾರ ದಾರಿ ತಪ್ಪಿದೆ. ಸಾಲದ ಅಸಲು, ಬಡ್ಡಿ ಭರಿಸುವುದು ಹೆಚ್ಚಾಗಿ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. 2009-10ರಲ್ಲಿ ಯೋಜನಾ ಗಾತ್ರ 21 ಸಾವಿರ ಕೋಟಿ ರೂ. ಇದ್ದರೆ ಇದರಲ್ಲಿ 15-16 ಸಾವಿರ ಕೋಟಿ ರೂ. ತಲುಪಲು ಸಾಧ್ಯವಾಗಿಲ್ಲ. ಕೇಂದ್ರದ ಜಿಡಿಪಿ ಶೇ.84 ರಷ್ಟಿದ್ದರೆ ರಾಜ್ಯದ್ದು ಕೇವಲ ಶೇ.6 ಇದೆ ಎಂದು ವಿವರಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಆರ್ಥಿಕ ತಜ್ಞರು, ಅಧಿಕಾರಿಗಳು, ರಾಜಕೀಯ ಮುಖಂಡರೊಂದಿಗೆ ಚಿಂತನೆ ನಡೆಸಬೇಕಾಗಿದೆ. ಅಕ್ರಮ ಗಣಿಗಾರಿಕೆ, ಅದಿರು ಅಕ್ರಮ ಸಾಗಾಣೆಯಲ್ಲಿ ಕಾಂಗ್ರೆಸ್ ಮುಖಂಡರು ಶಾಮೀಲಾಗಿದ್ದಾರೆ ಎನ್ನೋದಾದ್ರೆ ಈ ಪ್ರಕರಣ ಸಿಬಿಐ ತನಿಖೆಗೆ ಯಾಕೆ ಒಪ್ಪಿಸುತ್ತಿಲ್ಲ? ಯಾರ ಹಿತಾಸಕ್ತಿ ಕಾಪಾಡಲು ಯಡಿಯೂರಪ್ಪ ಹೊರಟಿದ್ದಾರೆ? ಎಂದು ಪ್ರಶ್ನಿಸಿದರು.