ಇನ್ನೂ ಸಚಿವ ಸ್ಥಾನದಲ್ಲಿಯೇ ಇದ್ದಾರಾ?: ಗೌಡರಿಗೆ ಹೈಕೋರ್ಟ್
ಬೆಂಗಳೂರು, ಮಂಗಳವಾರ, 7 ಸೆಪ್ಟೆಂಬರ್ 2010( 11:22 IST )
ಹಾಸನ ಮತ್ತು ಮೈಸೂರು ವೈದ್ಯಕೀಯ ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳ ವಜಾ ಪ್ರಕರಣದ ಕುರಿತು ಹೈಕೋರ್ಟ್ ಸರಕಾರ ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನು ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಇಷ್ಟೆಲ್ಲಾ ಘಟನೆ ನಡೆದರೂ ಅವರು ಇನ್ನೂ ಸಚಿವ ಸ್ಥಾನದಲ್ಲಿಯೇ ಹೇಗೆ ಮುಂದುವರಿದಿದ್ದಾರೆ ಎಂದು ಪ್ರಶ್ನಿಸಿದೆ.
ಸಚಿವರಿಗೆ ಕಾನೂನಿನ ತಿಳಿವಳಿಕೆ ಸ್ವಲ್ಪವೂ ಇಲ್ಲವಾ? ಕಾನೂನು ಎಂದರೆ ಏನು ಎಂದು ಹೇಳಲು ಸಚಿವ ಸಂಪುಟದಲ್ಲಿ ಯಾವ ಸಚಿವರೂ ಇಲ್ಲವೇ. ಇದು ಬಹಳ ಅಚ್ಚರಿಯ ವಿಷಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ಸರಕಾರದ ಅಂಗವೇ ಆಗಿರುವ ಸಚಿವರು ನೇಮಕಾತಿಗೆ ಅಸ್ತು ಎಂದಿರುವಾಗ ಈಗ ಏಕಾಏಕಿ ನೂರಾರು ಸಿಬ್ಬಂದಿಯನ್ನು ವಜಾ ಮಾಡಿರುವ ಕಾರಣ ಏನು ಎಂದು ನಮಗೆ ತಿಳಿಯುತ್ತಿಲ್ಲ. ಹಾಗಾದರೆ ಈ ಸಿಬ್ಬಂದಿಯ ನೇಮಕಾತಿ ಈಗ ಅಕ್ರಮ ಆದದ್ದಾದರು ಹೇಗೆ ಎಂದು ಸರಕಾರವನ್ನು ಕೋರ್ಟ್ ಪ್ರಶ್ನಿಸಿದೆ.
ಈ ಕುರಿತು ವೈದ್ಯಕೀಯ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾಗಿರುವ ಸಚಿವ ರಾಮಚಂದ್ರ ಗೌಡರು ಉತ್ತರ ನೀಡಬೇಕಾಗ ಅಗತ್ಯ ಇದೆ ಎಂದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು, ಸೆ.9ರೊಳಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಉತ್ತರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಪ್ರಕರಣದ ಬಗ್ಗೆ ತೀರ್ಪು ನೀಡುವುದು ದೊಡ್ಡ ವಿಷಯವೇನಲ್ಲ, ಆದರೆ ಈ ತೀರ್ಪನ್ನು ಪ್ರಶ್ನಿಸಿ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತದೆ. ಏಕೆಂದರೆ ಸರಕಾರದ ಬಳಿ ದೊಡ್ಡ, ದೊಡ್ಡ ವಕೀಲರನ್ನು ನೇಮಕ ಮಾಡಲು ಬೇಕಾದಷ್ಟು ಹಣ ಇದೆ. ಆದರೆ ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ನಡೆದು ಪ್ರಕರಣ ವಿಳಂಬ ಆಗುವುದು ತಮಗೆ ಇಷ್ಟವಿಲ್ಲ ಎಂದು ನ್ಯಾಯಮೂರ್ತಿಗಳು, ಶಿಕ್ಷಣ ಸಚಿವರು ಉತ್ತರ ನೀಡಲಿ ನಂತರ ನೋಡುವಾ ಎಂದರು.