ಜನರ ಬದುಕು ಹಸನುಗೊಳಿಸಲು, ಉದ್ಯೋಗ ಖಾತ್ರಿ, ರಾಜೀವ್ ಗಾಂಧಿ, ಇಂದಿರಾ ಆವಾಸ್ ಮೊದಲಾದ ಜನಪರ ಯೋಜನೆಗಳನ್ನು ಕೇಂದ್ರ ಸರಕಾರ ರೂಪಿಸಿ ಜಾರಿಗೊಳಿಸಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್ ಪರವಾಗಿ ನಗರದ ನಾನಾ ಪ್ರದೇಶಗಳಲ್ಲಿ ಪ್ರಚಾರ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾಗಾಂಧಿ, ಮನಮೋಹನ ಸಿಂಗ್ ನೇತೃತ್ವದ ಸರಕಾರ ಮಾಡಿರುವ ಕೆಲಸಗಳನ್ನು ನೋಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮತದಾರರನ್ನು ಕೋರಿದರು.
ರಾಜ್ಯ ಸರಕಾರ ಕೈಗೊಂಡಿರುವ ಅನೇಕ ಯೋಜನೆಗಳಿಗೆ ಶೇ.50 ರಷ್ಟು ಅನುದಾನವನ್ನು ಕೇಂದ್ರ ಸರಕಾರ ನೀಡುತ್ತಿದೆ. ಆದರೂ ಕೇಂದ್ರ ಸರಕಾರ ಏನು ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದರು.
ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಹೇಳಿಕೊಳ್ಳುವಂತ ಕೆಲಸವನ್ನು ಅವರೇನು (ಬಿಜೆಪಿ) ಮಾಡಿದ್ದಾರೆ ಎಂದು ಹೇಳಲಿ ಎಂದು ಮುನಿಯಪ್ಪ ಸವಾಲು ಹಾಕಿದರು. ಕೇಂದ್ರ ಸರಕಾರದ ನೆರವಿನಲ್ಲಿಯೇ ಆರೋಗ್ಯ ಕವಚ 108, ಶಾಲಾ ಮಕ್ಕಳಿಗೆ ಬಿಸಿಯೂಟ, ಬಡವರಿಗೆ ಪಡಿತರ ವಿತರಣೆ ಮಾಡುತ್ತಿದೆ ಎಂಬುದನ್ನು ಬಿಜೆಪಿಯವರು ಮರೆತಂತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಡಾ.ಅಜಯ್ ಸಿಂಗ್ ಅವರು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಗರಡಿಯಲ್ಲಿ ಪಳಗಿ ಜನರೊಟ್ಟಿಗಿದ್ದಾರೆ ಎಂದರು.