ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಕಟದಲ್ಲಿ ಸರಕಾರ; ಕಳಂಕಿತ ಸಚಿವ ಗೌಡರಿಗೆ ಕೊಕ್?
(Ramachandra Gowda | BS Yedyurappa | Karnataka | Medical Education Minister)
ಹಾಸನ ಮತ್ತು ಮೈಸೂರು ವೈದ್ಯಕೀಯ ಕಾಲೇಜು ನೇಮಕಾತಿ ಹಗರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದಂತೆ ಇದರ ರೂವಾರಿ ಎಂದು ಹೇಳಲಾಗುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಇಕ್ಕಟ್ಟಿಗೆ ಸಿಲುಕಿದ್ದು, ಸಂಪುಟದಿಂದ ವಜಾಗೊಳ್ಳುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಂತಹ ಕಠಿಣ ನಿರ್ಧಾರಕ್ಕೆ ಬರಲಿದ್ದಾರೆ. ಬಿಜೆಪಿ ಸರಕಾರಕ್ಕೆ ತೀವ್ರ ಮುಜುಗರ ತಂದಿರುವ ಪ್ರಕರಣ ಇದಾಗಿರುವುದರಿಂದ ನೇರ ಕ್ರಮಕ್ಕೆ ಮುಂದಾಗಬಹುದು ಎಂದು ಹೇಳಲಾಗುತ್ತಿದೆ.
ಇದೇ ಹಿನ್ನೆಲೆಯಲ್ಲಿ ವಿವಾದಕ್ಕೊಳಗಾಗಿರುವ ಕೆಲವು ಸಚಿವರನ್ನು ಬದಲಾಯಿಸುವ ಅಥವಾ ಸಂಪುಟದಿಂದ ಕಿತ್ತು ಹಾಕುವ ಕುರಿತೂ ಸಿಎಂ ಚಿಂತನೆ ನಡೆಸುತ್ತಿದ್ದು, ರಾಜೀನಾಮೆಗಳನ್ನು ಕೇಳುವ ಸಾಧ್ಯತೆಗಳಿವೆ.
ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿ ಹಗರಣವೀಗ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಸರಕಾರ ಇಂತಹ ಗಂಭೀರ ಯೋಚನೆಯಲ್ಲಿ ತೊಡಗಿದೆ. ಇತ್ತ ನೇಮಕಾತಿ ರದ್ಧತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳೂ ದಿನೇದಿನೇ ತೀವ್ರವಾಗುತ್ತಿವೆ. ಹೀಗಾಗಿ ಕಳಂಕಿತ ಸಚಿವರನ್ನು ಸಂಪುಟದಿಂದ ಕೈ ಬಿಡುವ ಮಾರ್ಗ ಹೊರತುಪಡಿಸಿ ಮುಖ್ಯಮಂತ್ರಿಯವರಿಗೆ ಬೇರೆ ದಾರಿಗಳಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಮೈಸೂರು ಮತ್ತು ಹಾಸನ ವೈದ್ಯಕೀಯ ಕಾಲೇಜುಗಳ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಯಡಿಯೂರಪ್ಪ ಆದೇಶ ನೀಡಿದ್ದರು. ನಿಯಮಾವಳಿಗಳನ್ನು ಗಾಳಿಗೆ ತೂರಿ, ಅಕ್ರಮವಾಗಿ ನೇಮಕಾತಿ ನಡೆಸಲಾಗಿದೆ ಎಂಬ ಆರೋಪಗಳು ಬಂದಿದ್ದವು.
ಇದರ ತನಿಖೆ ನಡೆಸಿದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅವ್ಯವಹಾರ ನಡೆದಿರುವುದರ ಕುರಿತು ವರದಿಯಲ್ಲಿ ಸ್ಪಷ್ಟಪಡಿಸಿದ್ದರು. ಇದೇ ಆಧಾರದಲ್ಲಿ ನೇಮಕಾತಿಯನ್ನು ಮುಖ್ಯಮಂತ್ರಿ ರದ್ದುಗೊಳಿಸಿದ್ದರು. ಪ್ರಕರಣ ಜಟಿಲವಾಗುತ್ತಿರುವುದರಿಂದ ಸಚಿವ ರಾಮಚಂದ್ರ ಗೌಡರನ್ನು ಸಂಪುಟದಿಂದ ಕೈ ಬಿಡುವುದು ಉತ್ತಮ ಎನ್ನುವ ಸಲಹೆ ಬಿಜೆಪಿ ಪಕ್ಷದಿಂದಲೂ ಬಂದಿದೆ ಎನ್ನಲಾಗುತ್ತಿದೆ.
ಈ ಹಿಂದೆ ವಿಧಾನ ಪರಿಷತ್ ಸಭಾಪತಿಯಾಗುವಂತೆ ಬಿಜೆಪಿ ಸೂಚಿಸಿದ್ದಾಗ ಧಿಕ್ಕರಿಸಿದ್ದ ಗೌಡರು, ಸಚಿವ ಸ್ಥಾನಕ್ಕೆ ಅಂಟಿಕೊಂಡಿದ್ದರು. ನಂತರ ಅದನ್ನು ಶಂಕರಮೂರ್ತಿಯವರಿಗೆ ನೀಡಲಾಗಿತ್ತು. ಹಾಗಾಗಿ ಪಕ್ಷ ಕೂಡ ಸಚಿವರ ಪರವಾಗಿಲ್ಲ.
ನಾನು ಸೀತೆ ಇದ್ದಂತೆ, ಅಗ್ನಿ ಪರೀಕ್ಷೆಗೂ ಸಿದ್ಧ ಎಂದು ಹೇಳುತ್ತಾ ಬಂದಿರುವ ರಾಮಚಂದ್ರಗೌಡರ ಮಾತು ಶುದ್ಧವಾಗಿತ್ತಾದರೂ, ಇದು ಮುಖ್ಯಮಂತ್ರಿಯವರಿಗೆ ಮನದಟ್ಟು ಮಾಡುವಷ್ಟು, ತನ್ನ ಕಳಂಕವನ್ನು ತೊಳೆದುಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿರಲಿಲ್ಲ. ಅದೇ ಕಾರಣದಿಂದ ನೇಮಕಾತಿ ರದ್ದು ಆದೇಶವನ್ನು ಯಡಿಯೂರಪ್ಪ ಹಿಂದಕ್ಕೆ ಪಡೆದುಕೊಳ್ಳಲು ನಿರಾಕರಿಸಿದ್ದರು.
ಶೀಘ್ರದಲ್ಲೇ ಸಂಪುಟ ಪುನಾರಚನೆಯಾಗಲಿದ್ದು, ಅದಕ್ಕೂ ಮೊದಲು ಸಚಿವರ ರಾಜೀನಾಮೆ ಪಡೆಯುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಹೇಳಿವೆ.