ಅಕ್ರಮ ಗಣಿಗಾರಿಕೆ ಕುರಿತು ಜೆಡಿಎಸ್ ನಾಯಕರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಳ್ಳು ಆರೋಪ ಹೊರಿಸುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ, ಸಿಎಂಗೆ ತಾಕತ್ತಿದ್ದರೆ ಈ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕುಮಾರಸ್ವಾಮಿ ಸಹೋದರರನ್ನು ಜೈಲಿಗೆ ಹಾಕಿಸಲಿ ಎಂದು ಸವಾಲು ಹಾಕಿದ್ದಾರೆ.
ಬಿಎಸ್‌ಕೆ ಗಣಿ ಕಂಪನಿಯಲ್ಲಿ ಕುಮಾರಸ್ವಾಮಿ ಕುಟುಂಬದವರ ಪಾಲುದಾರಿಕೆ ಇದೆ ಎಂದು ಮುಖ್ಯಮಂತ್ರಿ ಆರೋಪಿಸುತ್ತಿದ್ದಾರೋ, ಅದೇ ಗಣಿ ಕಂಪನಿಗೆ ಗಣಿ ಲೀಸ್ ನೀಡುವಂತೆ ಸ್ವತಃ ಯಡಿಯೂರಪ್ಪನವರೇ ಶಿಫಾರಸು ಮಾಡಿದ್ದಾರೆ. ಆ ಬಗ್ಗೆ ದಾಖಲೆ ಬಹಿರಂಗಪಡಿಸಲು ಸಿದ್ದ ಎಂದು ತಿರುಗೇಟು ನೀಡಿದ್ದಾರೆ.
ಗುಲ್ಬರ್ಗಾ ದಕ್ಷಿಣ, ಕಡೂರು ಉಪಚುನಾವಣೆಯಲ್ಲಿ ಎಲ್ಲಿ ಸೋಲುತ್ತೇವೆಯೋ ಎಂಬ ಭಯ ಮುಖ್ಯಮಂತ್ರಿಗಳನ್ನು ಕಾಡುತ್ತಿದ್ದು, ಸುಳ್ಳು ಆರೋಪ ಮಾಡುವ ಮೂಲಕ ಜೆಡಿಎಸ್ ಮುಖಕ್ಕೆ ಮಸಿಬಳಿಯಬೇಕು ಎಂಬ ಸಂಚು ರೂಪಿಸಿದ್ದಾರೆ ಎಂದು ರೇವಣ್ಣ ದೂರಿದರು.
ಅಕ್ರಮ ಗಣಿಗಾರಿಕೆಯೇ ಇರಲಿ, ಅದಿರು ರಫ್ತು ಪ್ರಕರಣ ಕುರಿತಂತೆ ಲೋಕಾಯುಕ್ತ ಅಥವಾ ಸಿಬಿಐಗೆ ಪ್ರಕರಣದ ತನಿಖೆ ಒಪ್ಪಿಸಲಿ, ತಪ್ಪು ಯಾರದ್ದೇ ಆಗಿದ್ದರೂ ಶಿಕ್ಷೆಯಾಗಲಿ ಎಂದರು.