ಇಂತಹ ಮಾನಗೆಟ್ಟ ಮುಖ್ಯಮಂತ್ರಿಯನ್ನು ದೇಶದಲ್ಲಿ ನಾ ನೋಡಿಲ್ಲ, ಇನ್ನೊಬ್ಬ ಹುಟ್ಟೋದು ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಲ್ಬರ್ಗದಲ್ಲಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ಗೌಡರ ಕುಟುಂಬದವರು ಸೇರಿದ್ದಾರೆ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಅಲ್ಲಾರಿ ಇವರೊಬ್ಬ ಮುಖ್ಯಮಂತ್ರಿನಾ ? ರಾಜ್ಯದಲ್ಲಿ ಬಿಜೆಪಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಇದೆ. ಸಿಬಿಐ ತನಿಖೆ ಮಾಡಿಸಿ ತಪ್ಪಿದ್ದರೆ ಗಲ್ಲಿಗೇರಿಸಲಿ. ಇವರನ್ನು ತಡೆದವರು ಯಾರು ಎಂದು ತಿರುಗೇಟು ನೀಡಿದ್ದಾರೆ.
1.3 ಕೋಟಿ ಟನ್ ಅದಿರು ವಿದೇಶಕ್ಕೆ ರಫ್ತಾಗಿದೆ ಅಂತಾರೆ. ಅದರಲ್ಲಿ ನಮ್ಮ ಕುಟುಂಬ, ನಮ್ಮ ಬಂಧುಗಳ ಪಾಲು ಎಷ್ಟಿದೆ ಬಹಿರಂಗಪಡಿಸಲಿ. ನಮ್ಮ ಪಾಲು ಇತ್ತು ಅಂತಾ ಆದ್ರೆ ಗಲ್ಲಿಗೇರಿಸಲು ನಾವು ಬೇಡಾ ಅಂದ್ವಾ ಸ್ವಾಮಿ? ಮುಖ್ಯಮಂತ್ರಿ ಅಂತಾ ಕರೀಲಿಕ್ಕೂ ಲಾಯಕ್ಕಿಲ್ಲಾರಿ ಇವ್ರು ಎಂದು ಕಟುವಾಗಿ ಟೀಕಿಸಿದರು.