ಗೋ ಹತ್ಯೆ ನಿಷೇಧಕ್ಕೆ ಅಡ್ಡಿ-ಕಾಂಗ್ರೆಸ್‌ಗೆ ಹೊಡೆತ: ಈಶ್ವರಪ್ಪ
ಬೆಂಗಳೂರು, ಶುಕ್ರವಾರ, 17 ಸೆಪ್ಟೆಂಬರ್ 2010( 11:53 IST )
'ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿ ಕುರಿತಂತೆ ಕಾಂಗ್ರೆಸ್ ರಾಜಕೀಯ ಮಾಡಿದ್ದೇ ಆ ಪಕ್ಷದ ಗೆಲುವಿಗೆ ದೊಡ್ಡ ಹೊಡೆತ ಕೊಟ್ಟಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.
ಬಹುಸಂಖ್ಯಾತರ ಹಿತದೃಷ್ಟಿಯಿಂದ ರಾಜ್ಯ ಸರಕಾರ ಗೋ ಹತ್ಯೆ ನಿಷೇಧಕ್ಕೆ ಮುಂದಾದರೆ, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಸಾಕಷ್ಟು ಕಸರತ್ತು ನಡೆಸಿತ್ತು. ಅದರ ಪರಿಣಾಮವನ್ನು ಉಪ ಚುನಾವಣೆಯಲ್ಲಿ ಅನುಭವಿಸಿ, ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದರು.
ಗುರುವಾರ ಕಡೂರು, ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲಾದರೂ ಕಾಂಗ್ರೆಸ್ ಪಕ್ಷ ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತರಲು ಸಹಕಾರ ನೀಡಲಿ ಎಂದು ಸಲಹೆ ನೀಡಿದರು. ಉಪ ಚುನಾವಣೆ ಫಲಿತಾಂಶ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹಾಗೂ ಸಿದ್ದರಾಮಯ್ಯ ಅವರಿಗೆ ಪಾಠ ಎಂದು ಟೀಕಿಸಿದರು.
ನಿರೀಕ್ಷೆಯಂತೆ ಕಡೂರಿನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಲ್ಬರ್ಗದಲ್ಲಿ ಅನುಕಂಪದ ಅಲೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ ಎಂದು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.