ಚಿರನಿದ್ರೆಗೆ ಜಾರಿದ ಸಂಗೀತ ಸಾಮ್ರಾಟ ಪಂಡಿತ ಪುಟ್ಟರಾಜ ಗವಾಯಿ ಅವರ ಪಾರ್ಥಿವ ಶರೀರವನ್ನು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಇರುವ ಪಂಡಿತ ಪಂಚಾಕ್ಷರ ಗವಾಯಿಗಳ ಗದ್ದುಗೆಯ ಪಕ್ಕದಲ್ಲಿಯೇ ಸಕಲ ಧಾರ್ಮಿಕ ವಿಧಿವಿಧಾನ ಹಾಗೂ ಸರಕಾರಿ ಗೌರವಗಳೊಂದಿಗೆ ಶನಿವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಇಂದು ಬೆಳಿಗ್ಗೆ ಹತ್ತು ಗಂಟೆಗೆ ಕೆ.ಎಚ್.ಪಾಟೀಲ ಕ್ರೀಡಾಂಗಣದಿಂದ ಪುಟ್ಟರಾಜ ಗವಾಯಿಗಳ ಪಾರ್ಥಿವ ಶರೀರವನ್ನು ಗದಗ-ಬೆಟಗೇರಿಯ ಭೂಮರೆಡ್ಡಿ ವೃತ್ತ, ವೀರೇಶ್ವರ ಸರ್ಕಲ್, ಬಸವೇಶ್ವರ ಸರ್ಕಲ್, ಹುಯಿಲಗೋಳ ನಾರಾಯಣ ರಾವ್ ವೃತ್ತ ಸೇರಿದಂತೆ ನಗರದ ವಿವಿಧೆಡೆ ಅಂತಿಮ ದರ್ಶನದ ಮೆರವಣಿಗೆ ನಡೆಸಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ವಿ.ಎಸ್.ಆಚಾರ್ಯ, ಸಿದ್ದಗಂಗಾಶ್ರೀ ಸೇರಿದಂತೆ ರಾಜ್ಯದ ಹಲವು ಪ್ರಮುಖ ಮಠಾಧೀಶರು ಗಾನಯೋಗಿಯ ಅಂತಿಮ ದರ್ಶನ ಪಡೆದರು.
ಗಾನಯೋಗಿಯ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಜನಸಾಗರವೇ ತುಂಬಿತ್ತು. ನಡೆದಾಡುವ ದೇವರೆಂದೇ ಪರಿಗಣಿತರಾಗಿದ್ದ ಗವಾಯಿ ಅವರ ಪಾರ್ಥಿವ ಶರೀರದ ಮೆರವಣಿಗೆ ಸಂಜೆ ನಾಲ್ಕು ಗಂಟೆಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ಬರುವುದರೊಂದಿಗೆ ಮೆರವಣಿಗೆ ಅಂತ್ಯಗೊಂಡಿತ್ತು.
ಶೋಕ ಸಾಗರದಲ್ಲಿ ಮುಳುಗಿದ ಭಕ್ತರು ಪಾರ್ಥಿವ ಶರೀರದ ಅಂತಿಮ ಯಾತ್ರೆ ಭೂಮರೆಡ್ಡಿ ವೃತ್ತ ವೀರೇಶ್ವರ ಸರ್ಕಲ್, ಬಸವೇಶ್ವರ ಸರ್ಕಲ್, ಹುಯಿಲಗೋಳ ನಾರಾಯಣ ರಾವ್ ವೃತ್ತ, ವಿವಿಧೆಡೆ ಸಂಚರಿಸಿ ವೀರೇಶ್ವರ ಪುಣ್ಯಾಶ್ರಮಕ್ಕೆ ತರಲಾಯಿತು. ಕಳೆದ ಹಲವಾರು ದಿನಗಳಿಂದ ಶ್ವಾಸಕೋಶ, ನ್ಯೂಮೋನಿಯಾದಿಂದ ಬಳಲುತ್ತಿದ್ದ ಪಂಡಿತ ಪುಟ್ಟರಾಜ ಗವಾಯಿ ಅವರು ಶುಕ್ರವಾರ ಮಧ್ಯಾಹ್ನ ವಿಧಿವಶರಾಗಿದ್ದರು.
ನಿನ್ನೆ ಮಧ್ಯಾಹ್ನ ಕೆ.ಎಚ್.ಪಾಟೀಲ್ ಕ್ರೀಡಾಂಗಣದಲ್ಲಿ ಗಾನಯೋಗಿ ಗವಾಯಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದ ಶ್ರೀಗಳ ದರ್ಶನಕ್ಕಾಗಿ ರಾತ್ರಿ-ಹಗಲು ತಂಡೋಪತಂಡವಾಗಿ ಭಕ್ತರು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದರು.
ಸರಕಾರಿ ಗೌರವದೊಂದಿಗೆ ಸಮಾಧಿ: ಗವಾಯಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕಾಗಿ ಸುಮಾರು 450 ಮಂದಿ ಸ್ವಾಮೀಜಿಗಳು ಪಂಚಾಕ್ಷರಿ ಗವಾಯಿ ಅವರ ಗದ್ದುಗೆ ಸಮೀಪದಲ್ಲಿಯೇ ವೀರಶೈವ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಮಾಧಿಯ ಸಿದ್ದತೆ ನಡೆಸಿದ್ದರು.
ಸಮಾಧಿಯ ಶುದ್ದೀಕರಣ, ಪೂಜೆಗೆ ಆಕಳ ಹಾಲು, ಮೊಸರನ್ನು ಬಳಸಲಾಗಿತ್ತು. ವೀರಶೈವ ಧರ್ಮದ ಅನುಸಾರವಾಗಿ ರುದ್ರಾಭಿಷೇಕ ಪಾದೋದಕ ಪ್ರಸಾದಗಳ ಮೂಲಕ ಗವಾಯಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.