ಬೆಂಗಳೂರು, ಮಂಗಳವಾರ, 21 ಸೆಪ್ಟೆಂಬರ್ 2010( 19:02 IST )
PR
ಸಚಿವ ಸಂಪುಟ ಪುನಾರಚನೆ ಗೊಂದಲ, ಬೆದರಿಕೆಯ ನಡುವೆಯೂ ಸಚಿವರಾದ ಶಿವನಗೌಡ ನಾಯಕ್, ಗೂಳಿಹಟ್ಟಿ ಶೇಖರ್, ಅರವಿಂದ ಲಿಂಬಾವಳಿ ಅವರಿಗೆ ಕೊಕ್ ನೀಡಲಾಗಿದ್ದು, ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರು ಮಂದಿ ನೂತನ ಸಚಿವರ ಸೇರ್ಪಡೆಗೆ ಮುಂದಾಗಿದ್ದಾರೆ.
ಗ್ರಂಥಾಲಯ ಸಚಿವ ಶಿವನಗೌಡ ನಾಯಕ್, ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಹಾಗೂ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗಳು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿಗಳ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಅಂತೂ ಎಲ್ಲಾ ಒತ್ತಡ ತಂತ್ರ, ಬೆದರಿಕೆಯ ನಾಟಕೀಯ ಬೆಳವಣಿಗೆಯ ನಡುವೆಯೂ ಗೂಳಿಹಟ್ಟಿ, ಶಿವನಗೌಡ, ಅರವಿಂದ ಲಿಂಬಾವಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
NRB
ವಿ ಸೋಮಣ್ಣ, ಮಾಜಿ ಸಚಿವೆ, ಶಾಸಕಿ ಶೋಭಾ ಕರಂದ್ಲಾಜೆ, ಸಿಸಿ ಪಾಟೀಲ್, ಅನೇಕಲ್ ನಾರಾಯಣ ಸ್ವಾಮಿ, ಸಿ.ಎಚ್ ವಿಜಯಶಂಕರ್, ಜೀವರಾಜ್ ನೂತನ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.
ಸಿ.ಟಿ.ರವಿ, ಅಪ್ಪಚ್ಚು ರಂಜನ್ ರಾಜೀನಾಮೆ: ಸಚಿವ ಸಂಪುಟ ಪುನಾರಚನೆ ಕಸರತ್ತಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಇಬ್ಬರು ಶಾಸಕರು ತಮಗೆ ಸಂಪುಟದಲ್ಲಿ ಸಚಿವಪಟ್ಟ ನೀಡುವ ಕುರಿತು ಸ್ಪಷ್ಟ ಉತ್ತರ ಸಿಗದಿರುವ ನಿಟ್ಟಿನಲ್ಲಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ ಪ್ರಮಾಣವಚನ ಸ್ವೀಕಾರ: ಹಾಲಿ ಮೂವರು ಮಂತ್ರಿಗಳ ರಾಜೀನಾಮೆ ಪಡೆಯುವ ಮೂಲಕ ನಾಳೆ ಬೆಳಿಗ್ಗೆ ರಾಜಭವನದಲ್ಲಿ ಆರು ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಸಚಿವ ಸಂಪುಟದಲ್ಲಿ ಯಾರೆಲ್ಲ ಹೊಸದಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.
NRB
ಮುಖ್ಯಮಂತ್ರಿಗಳಿಗೆ ಒಳ್ಳೆಯದಾಗಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಒಳ್ಳೆಯದಾಗಲಿ. ಅವರು ಇನ್ನೂ 20 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಆಶಿಸುತ್ತೇವೆ ಎಂದು ಸಚಿವ ಸ್ಥಾನದಿಂದ ವಜಾಗೊಂಡಿರುವ ಗೂಳಿಹಟ್ಟಿ ಶೇಖರ್ ಹಾಗೂ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿದ್ದಾರೆ.
'ನಾನು ಒಬ್ಬಂಟಿ, ನನಗೆ ಹೋರಾಡುವ ಶಕ್ತಿ ಇಲ್ಲ ಹಾಗಾಗಿ ಕ್ಷೇತ್ರದ ಶಾಸಕನಾಗಿಯೇ ಕಾರ್ಯನಿರ್ವಹಿಸುತ್ತೇನೆ' ಎಂದು ಗೂಳಿಹಟ್ಟಿ ಶೇಖರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ರಾಜೀನಾಮೆ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ಳೇನೆ ಎಂದು ಹೇಳಿದ್ದೀರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಹೌದು ಆ ರೀತಿ ಹೇಳಿದ್ದೆ. ಆದರೆ ನನ್ನ ಕ್ಷೇತ್ರದ ಜನರ ನೀವು ಆತ್ಮಹತ್ಯೆ ಮಾಡಿಕೊಳ್ಳಬಾರದು. ಮಂತ್ರಿಗಿರಿ ಶಾಶ್ವತವಲ್ಲ, ನೀವು ಶಾಸಕರಾಗಿಯೇ ಕ್ಷೇತ್ರದ ಸೇವೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ರೆಡ್ಡಿ ಬ್ರದರ್ಸ್ ಅಪಸ್ವರ: ಬಿಜೆಪಿ ಪಕ್ಷ ಆಡಳಿತಕ್ಕೆ ಬರುವ ಸಂದರ್ಭದಲ್ಲಿ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ಅವರ ಬೆಂಬಲ ಅತ್ಯಗತ್ಯವಾಗಿತ್ತು. ಆ ನಿಟ್ಟಿನಲ್ಲಿ ಸಚಿವಸ್ಥಾನದಿಂದ ಅವರನ್ನು ಕೈಬಿಡುವುದಕ್ಕೆ ತಮ್ಮ ತೀವ್ರ ವಿರೋಧ ಇದೆ ಎಂದು ಸಚಿವರಾದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ಸಚಿವ ಸಂಪುಟ ಪುನಾರಚನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಸಚಿವ ಸಂಪುಟ ಸಭೆಗೂ ರೆಡ್ಡಿ ಬ್ರದರ್ಸ್ ಸೇರಿದಂತೆ ಏಳು ಮಂದಿ ಗೈರು ಹಾಜರಾಗುವ ಮೂಲಕ ಅಸಮಾಧಾನ ಮುಂದುವರಿದಂತಾಗಿದೆ.