ಸಚಿವ ಸಂಪುಟ ಪುನಾರಚನೆಯಲ್ಲಿ ತನಗೂ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರಿ, ಇಲ್ಲದಿದ್ದರೆ 20 ಮಂದಿ ಶಾಸಕರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಇತರ ಶಾಸಕರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ರಾಗ ಬದಲಿಸಿ ತೆಪ್ಪಗಾಗಿದ್ದಾರೆ.
ಮಂಗಳವಾರ ಸಚಿವ ಸಂಪುಟ ಪುನಾರಚನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕಸರತ್ತು ನಡೆಸಿ ಹಾಲಿ ಮೂರು ಮಂದಿ ಸಚಿವರನ್ನು ವಜಾಗೊಳಿಸಿ ಆರು ಮಂದಿಗೆ ಸಚಿವಪಟ್ಟ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿದ್ದರು. ಮತ್ತೊಂದೆಡೆ ಅಬಕಾರಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬೇಳೂರು, ಬಿ.ಪಿ.ಹರೀಶ್, ಎನ್.ಸಂಪಂಗಿ, ನಾಗರಾಜ್, ನಂಜುಂಡಸ್ವಾಮಿ ಸೇರಿದಂತೆ ಇತರ ಶಾಸಕರು ಸಭೆ ಸೇರಿ ಸಚಿವಗಿರಿ ಪಡೆಯುವ ಕುರಿತು ಚರ್ಚೆ ನಡೆಸಿದ್ದರು.
ಚರ್ಚೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ, ನಮ್ಮ ನಿಷ್ಠೆ ಏನಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ. ಹಾಗಾಗಿ ಯಾವ ಶಾಸಕರೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದರು. ಆದರೆ 20 ಶಾಸಕರು ರಾಜೀನಾಮೆ ನೀಡುವುದು ಖಚಿತ ಎಂದು ತಿಳಿಸಿ, ಸಭೆಯಲ್ಲಿ ಠಾಕು-ಠೀಕಾಗಿ ಭಾಗವಹಿಸಿದ್ದ ಬೇಳೂರು ಮಾತ್ರ ನಂತರ ಸದ್ದಿಲ್ಲದೆ ನಾಪತ್ತೆಯಾಗಿದ್ದರು!
ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವಸ್ಥಾನ ನೀಡುವಂತೆ ಮುಖ್ಯಮಂತ್ರಿಗಳ ಜತೆ ರೇಣುಕಾಚಾರ್ಯ ಪಟಾಲಂ ಚರ್ಚಿಸಿತ್ತು. ಆದರೆ ಯಾವುದೇ ಪ್ರಯೋಜನಾಗಿಲ್ಲವಾಗಿತ್ತು. ಅಷ್ಟಾದರೂ ಅಪಸ್ವರ ಎತ್ತಿದ್ದ ಬಿ.ಪಿ.ಹರೀಶ್, ರೇಣುಕಾಚಾರ್ಯ, ನಂಜುಂಡಸ್ವಾಮಿ ಸೇರಿದಂತೆ ಹಲವು ಶಾಸಕರು ಬೇಳೂರು ರಾಜೀನಾಮೆ 'ಬಾಂಬ್' ಠುಸ್ ಆಗುವಂತೆ ಮಾಡಿದರು.
ನಂತರ ಸುದ್ದಿಗಾರರು ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೂ ಬೇಳೂರು ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದರು. ಇದಕ್ಕೆ ಮುಖ್ಯಮಂತ್ರಿಗಳ ಆಶ್ವಾಸನೆಯೇ ಕಾರಣ ಎನ್ನಲಾಗುತ್ತಿದೆ. ಮುಂದಿನ ಸಚಿವ ಸಂಪುಟ ಪುನಾರಚನೆಯಲ್ಲಿ ಬೇಳೂರುಗೆ ಸ್ಥಾನ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.