ಬೆಂಗಳೂರು, ಭಾನುವಾರ, 26 ಸೆಪ್ಟೆಂಬರ್ 2010( 11:51 IST )
PTI
ಕೆಐಎಡಿಬಿ ಪರಿಹಾರ ವಿತರಣೆಯಲ್ಲಿ ಭಾರಿ ಅವ್ಯವಹಾರವಾಗಿದ್ದು, ಸಚಿವ ಕಟ್ಟಾ ಸುಬ್ರಮಣ್ಯಂ ನಾಯ್ಡು ಪುತ್ರ ಜಗದೀಶ್ ನಾಯ್ಡು ಸರಕಾರಕ್ಕೆ ನೂರಾರು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಗಲೂರು ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷದಲ್ಲಿಯೇ ಪ್ರಕರಣ ದಾಖಲಾಗಿದ್ದರೂ ರಾಜೀಕಯ ಒತ್ತಡಕ್ಕೆ ಮಣಿದು ಪೊಲೀಸರು ತನಿಖೆಯನ್ನು ಕೈಬಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಜಾಲ ಹೋಬಳಿಯ ಬಂಡಿಕೊಡಿಗೆ ಹಳ್ಳಿ ಗ್ರಾಮದ ಸರ್ವೆ ನಂಬರ್ 40ರಲ್ಲಿ ಭೂಮಿ ಹೊಂದಿರುವ ಮುನಿ ಅಂಜನಪ್ಪ ಎನ್ನುವವರು 2009ರ ಏಪ್ರಿಲ್ 17 ರಂದು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಕೆಐಎಡಿಬಿ ವತಿಯಿಂದ ವಿಶೇಷ ಆರ್ಥಿಕ ವಲಯ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಕೆಲವು ವ್ಯಕ್ತಿಗಳು ಪರಿಹಾರ ವಿತರಣೆಯಲ್ಲಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದರು.
ಪ್ರಕರಣದಲ್ಲಿ ಶ್ರೀನಿವಾಸ್ ಮೊದಲ ಆರೋಪಿಯಾದರೇ, ಗೋಪಿ ಎರಡನೇ ಆರೋಪಿಯಾಗಿದ್ದಾರೆ. ಜಗದೀಶ್ ನಾಯ್ಡು ಮೂರನೇ ಆರೋಪಿಯಾಗಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಲಾಗಿದೆ.
ದೂರು ದಾಖಲಿಸಿದ ನಂತರ ತನಿಖೆ ನಡೆಸದೇ ಕರ್ತವ್ಯಲೋಪವೆಸಗಿರುವ ಪೊಲೀಸ್ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.ಸಚಿವ ಕಟ್ಟಾ ಸುಬ್ರಮಣ್ಯಂ ನಾಯ್ಡು ವಿಳಾಸ ನೀಡಿ 1.24 ಕೋಟಿ ರೂಪಾಯಿ ಪರಿಹಾರ ಪಡೆದು ಕೆಐಎಡಿಬಿಗೆ ವಂಚಿಸಿರುವುದು ಪತ್ತೆಯಾಗಿದ್ದು, ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.