ದ್ವೇಷದ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಮನಗರ ಜಿಲ್ಲೆಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ ಎಂದು ಸಂಸದ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕುಂಚಿಟಿಗ ಒಕ್ಕಲಿಗರ ಸಂಘ ಹಾಗೂ ಅಭಿಮಾನಿಗಳಿಂದ, ಬಿಡದಿಯ ಸರೋಜಮ್ಮ ಚಿಕ್ಕತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಡಿವೈಎಸ್‌ಪಿ ವಿ. ಗೋವಿಂದಯ್ಯ ಹಾಗೂ ಸಮಾಜದ ಇತರ ಗಣ್ಯರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
'ಜಿಲ್ಲೆಯ ಜನತೆ ನನಗೆ ರಾಜಕೀಯ ಪುನರ್ ಜನ್ಮ ನೀಡಿದ್ದಾರೆ. ಆದರೆ ದ್ವೇಷದ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಮನಗರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ವಿಶೇಷ ಶಕ್ತಿ ಹೊಂದಿರುವ ಈ ಮಣ್ಣನ್ನು ಪ್ರತಿನಿಧಿಸಿರುವ ನನ್ನನ್ನು ಇಡೀ ರಾಜ್ಯವೇ ಗುರುತಿಸುವ ಕಾಲ ಸಮೀಪದಲ್ಲಿ ಇದೆ ಎಂದರು.
ರಾಜಕೀಯ ಕ್ಷೇತ್ರ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಸಮುದಾಯದ ಜನತೆ ಒಗ್ಗಟ್ಟು ಪ್ರದರ್ಶಿಸಬೇಕು. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ 1.5 ಕೋಟಿ ಜನರಿದ್ದಾರೆ. ಸಮುದಾಯದ ಜನತೆ ಸ್ವಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹಾಗೂ ಸಬಲೀಕರಣಕ್ಕಾಗಿ ಒಂದಾಗಬೇಕು ಎಂದು ಕರೆ ನೀಡಿದರು.
ಶ್ರೀಕ್ಷೇತ್ರ ಪಟ್ಟನಾಯಕನಹಳ್ಳಿ, ಸ್ಪಟಿಕಪುರಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿಯವರನ್ನು ಕುಂಚಿಟಿಗ ಒಗ್ಗಲಿಗ ಗುರು ಎನ್ನುವ ಬದಲು ಒಕ್ಕಲಿಗ ಸಮಾಜದ ಸ್ವಾಮೀಜಿ ಎಂದು ಬಿಂಬಿಸಬೇಕು. ಶ್ರೀಗಳು ನಿಸ್ವಾರ್ಥ ಮನೋಭಾವ ಹೊಂದಿದ್ದು, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸರಕಾರದ ಮೇಲೆ ಒತ್ತಡ ಹೇರುವ ಜತೆಗೆ ಹೋರಾಟ ರೂಪಿಸುತ್ತಿರುವ ರಾಜ್ಯದ ಪ್ರಥಮ ಸ್ವಾಮೀಜಿ ಎಂಬ ಖ್ಯಾತಿ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.