ನಗರ ನಿವಾಸಿಗಳ ಬಹು ನಿರೀಕ್ಷಿತ ಅಕ್ರಮ-ಸಕ್ರಮ ಯೋಜನೆ ಮತ್ತೆ ನೆನೆಗುದಿಗೆ ಬಿದ್ದಿದೆ. ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಈ ಪ್ರಮುಖ ಮಸೂದೆಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಒಪ್ಪಿಗೆಗೆ ಸರಕಾರ ಕಳುಹಿಸಿತ್ತು. ಆದರೆ, ಈ ಮಸೂದೆಗೆ ಅಂಕಿತ ಹಾಕದೆ ಎರಡನೇ ಬಾರಿಗೆ ಹಿಂದಕ್ಕೆ ಕಳುಹಿಸಿದ್ದಾರೆ.
ಬಡವರಿಗೆ ಅನುಕೂಲವಾಗಲೆಂದು ಅಕ್ರಮ-ಸಕ್ರಮ ಯೋಜನೆ ರೂಪಿಸಲಾಗಿತ್ತು. ಬಡವರಿಗೆ ನೆರವಾಗುವ ಈ ಯೋಜನೆಗೆ ಒಪ್ಪಿಗೆ ಪಡೆಯಲು ನ್ಯಾಯಾಲಯದ ಮೊರೆ ಹೋಗಲಾಗುವುದೆಂದು ಕಾನೂನು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಜ್ಯಪಾಲರು ಅಂಕಿತ ಹಾಕದೆ ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ ಎಂಬ ವಿಚಾರ ಸರಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಅಕ್ರಮ ಸಕ್ರಮ ಮಸೂದೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ರಾಜ್ಯಪಾಲರು ವಾಪಸು ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಈ ಬಗ್ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.