ಕರಾವಳಿ ಪ್ರವಾಸೋದ್ಯಮದ ವಿವಿಧ ಯೋಜನೆ ಅನುಷ್ಠಾನಕ್ಕೆ ಸುಮಾರು 4ರಿಂದ 5 ಸಾವಿರ ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಶಾಸಕ ಎನ್.ಯೋಗೀಶ್ ಭಟ್ ತಿಳಿಸಿದ್ದಾರೆ.
ದ.ಕ. ಜಿಲ್ಲೆ ಪ್ರವಾಸೋದ್ಯಮ ಇಲಾಖೆ ಮತ್ತು ಮಂಗಳೂರು ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ವತಿಯಿಂದ ಪುರಭವನದಲ್ಲಿ ನಡೆದ ಪ್ರವಾಸೋದ್ಯಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಗ್ರ ಅಭಿವೃದ್ಧಿ ಕುರಿತಂತೆ ಸಿಂಗಾಪುರ ಮತ್ತು ಮಲೇಷಿಯಾ ತಂಡ ಅಧ್ಯಯನ ನಡೆಸಿದ್ದು, ಖಾಸಗಿ ಸಹಭಾಗಿತ್ವದೊಂದಿಗೆ ವಿವಿಧ ಯೋಜನೆ ಅನುಷ್ಠಾನಗೊಳ್ಳಲಿದೆ. ಪಶ್ಚಿಮ ನದಿ ಬದಿಯಲ್ಲಿ ಸುಮಾರು 150 ಎಕರೆ ಭೂಮಿಯಲ್ಲಿ ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ಮೆರೈನ್ ಅಕ್ವೇರಿಯಂ ಪಾರ್ಕ್, ಡಾಲಿನ್ ಶೋ, ಲೈಟಿಂಗ್ ಶೋ, ರೋಪ್ ವೇ ಕಾರ್ ಇತ್ಯಾದಿ ಯೋಜನೆಗಳು ಸೇರಿದಂತೆ ಸಮಗ್ರ ಮನೋರಂಜನೆ ಮತ್ತು ಮಾಹಿತಿ ನೀಡುವ ಕೇಂದ್ರವನ್ನಾಗಿ ಆಭಿವೃದ್ಧಿ ಪಡಿಸಲಾಗುವುದು ಎಂದರು.
ಪಿಲಿಕುಳ ಪಕ್ಕದಲ್ಲಿರುವ ಸುಮಾರು 400 ಎಕರೆ ಸ್ಥಳವನ್ನು ಪಿಲಿಕುಳ ವಿಸ್ತರಣೆಗೆ ನೀಡಬೇಕು ಎಂದು ಅವರು ತಿಳಿಸಿದರು. ಮುಂದಿನ ಐದು ವರ್ಷಗಳಲ್ಲಿ ಮಂಗಳೂರು ವಿಶ್ವದ ಪ್ರವಾಸೋದ್ಯಮ ಭೂಪಟದಲ್ಲಿ ಗುರುತಿಸಲ್ಪಡುತ್ತದೆ. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ಜಲ ಸಾರಿಗೆ ಸಂಪರ್ಕ ಶೀಘ್ರದಲ್ಲಿ ಆಗಲಿದೆ ಎಂದರು.
ಜಿಲ್ಲೆಯಲ್ಲಿ ಬೀಚ್, ಪರಿಸರ, ಶಿಕ್ಷಣ, ವೈದ್ಯಕೀಯ, ಧಾರ್ಮಿಕ, ಸಂಸ್ಕೃತಿಕ ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶ ಇದೆ. ಆದರೆ ಅದನ್ನು ಸಮರ್ಪಕ ರೀತಿಯಲ್ಲಿ ಅಭಿವೃದ್ದಿ ಪಡಿಸಿಲ್ಲ. ಇದಕ್ಕಾಗಿ ಟೂರಿಸಂ ಕೌನ್ಸೆಲ್ ಅನ್ನು ರಚಿಸಲಾಗುವುದು. ಜತೆಗೆ ಬೇರೆ ಬೇರೆ ಟೂರಿಸಂಗೆ ಸಮಿತಿ ಮಾಡಿ ಸಮಗ್ರವಾಗಿ ಕೌನ್ಸಿಲ್ ಸಮಿತಿ ನಿರ್ವಹಿಸುವಂತೆ ಮಾಡಲಾಗುವುದು. ಹೋಮ್ ಸ್ಟೇಗೆ ಹೆಚ್ಚಿನ ಅವಕಾಶವಿದ್ದು, ಮೊಗವೀರ ಸಮಾಜದವರು ಸಹಕಾರ ನೀಡಬೇಕು ಎಂದರು.