ದೇವಸ್ಥಾನಗಳಲ್ಲಿ ಶುಚಿತ್ವ ಪಾಲನೆ ಕಡ್ಡಾಯಗೊಳಿಸಿ, ಬಫೆ, ಪ್ಲ್ಯಾಸ್ಟಿಕ್ ನಿಷೇಧ ಜಾರಿಗೆ ತರಲಾಗುವುದು ಎಂದು ಮುಜರಾಯಿ ಸಚಿವ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.
ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿಗೆ ತೆರಳಿದ ಕೂಡಲೇಈ ಕುರಿತು ಸುತ್ತೋಲೆ ಹೊರಡಿಸುತ್ತೇನೆ ಎಂದರು.
ಬಳಸಿದ ಪ್ಲೇಟ್‌ಗಳಲ್ಲಿಯೇ ಊಟ ಹಾಕಬೇಡಿ. ಬಾಳೆ ತೋಟಗಳನ್ನು ಬೆಳೆಸಲು ಪ್ರೋತ್ಸಾಹ ನೀಡುವ ಮೂಲಕ ಕೃಷಿಕರಿಗೂ ನೆರವಾಗಿ. ಪರಂಪರೆಯೂ ಉಳಿಯುತ್ತದೆ, ಕೃಷಿಕರ ಬಾಳೂ ಬೆಳಗುತ್ತದೆ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಅತಿ ಹೆಚ್ಚು ದೇವಸ್ಥಾನಗಳಿರುವುದೇ ಕರಾವಳಿಯಲ್ಲಿ. ಎಲ್ಲ ಜಾತಿಯ ಶೇ.90 ಮಂದಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಶುಚಿತ್ವವನ್ನು ಕಡ್ಡಾಯ ಪಾಲಿಸಬೇಕು ಎಂದು ಪಾಲೆಮಾರ್ ಹೇಳಿದರು.
ದೇವಸ್ಥಾನ ಜೀರ್ಣೋದ್ದಾರ ಪರಂಪರೆಗೆ ಅನುಗುಣವಾಗಿಯೇ ನಡೆಯಬೇಕು. ಜೀಣೋದ್ದಾರ ಹೆಸರಲ್ಲಿ ವಸತಿಗೃಹ, ವಾಣಿಜ್ಯ ಸಂಕೀರ್ಣಗಳಂತೆ ಕಾಂಕ್ರೀಟ್ ಕಾಡು ಮಾಡುವುದು ಬೇಡ. ದೇವಸ್ಥಾನ ಪರಿಸರದಲ್ಲಿ ಮರಗಿಡಗಳನ್ನು ಕಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
ನಾಗಬನಗಳಿಗೆ ಗ್ರಾನೈಟ್ ಹಾಕುವುದು ಸಲ್ಲ. ಬನದಲ್ಲಿ ನಾಗಗಳು ವಾಸಿಸುವಂತಾಗಬೇಕು. ನಾಗ ಸಂಕುಲ ಇದ್ದರೆ ಆ ಪರಿಸರದಲ್ಲಿ ರೋಗ ರುಜಿನಗಳು ಕಡಿಮೆಯಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಿಬಂಧನೆ ಮೀರಿದರೆ ದೇವಸ್ಥಾನಗಳಿಗೆ ಸರಕಾರ ನೀಡುವ ಸವಲತ್ತು ರದ್ದುಗೊಳಿಸಲಾಗುವುದು ಎಂದರು.