ಭೂ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವರು ಮಾತ್ರವಲ್ಲ, ಸಿಎಂ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಹಗರಣದಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
ರಾಜ್ಯದ ಬಿಜೆಪಿ ಸರಕಾರ ಒಂದಿಲ್ಲೊಂದು ಹಗರಣದಲ್ಲಿ ಸಿಲುಕಿಕೊಂಡು ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಕೆಐಎಡಿಬಿ ಹಗರಣದಲ್ಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಿಲುಕಿಕೊಂಡಿದ್ದರೆ, ಸಿಎಂ ಯಡಿಯೂರಪ್ಪಗೆ ಆಡಳಿತ ನಡೆಸುವ ಅನುಭವವೇ ಇಲ್ಲ ಎಂದ ಅವರು, ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಈ ಸರಕಾರ ಅತ್ಯಂತ ದುಷ್ಟ, ಭ್ರಷ್ಟ ಮತ್ತು ಅಸಮರ್ಪಕ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಿಂದ ತೀವ್ರ ಹಾನಿ ಸಂಭವಿಸಿದೆ. ಹಾಸನ ಜಿಲ್ಲೆಯಲ್ಲೂ ಸಾಕಷ್ಟು ಹಾನಿಯಾಗಿದ್ದರೂ ಸರಕಾರ ಕೈಕಟ್ಟಿ ಕುಳಿತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಪರಿಹಾರ ಕಾಮಗಾರಿ ತೆಗೆದುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.