ಹುಬ್ಬಳ್ಳಿ, ಬುಧವಾರ, 29 ಸೆಪ್ಟೆಂಬರ್ 2010( 15:17 IST )
ಜಲ ನಿರ್ಮಲ ಯೋಜನೆಗೆ ವಿಶ್ವ ಬ್ಯಾಂಕ್ ಕೇವಲ ಶೇ. 1 ಬಡ್ಡಿ ದರದಲ್ಲಿ 825 ಕೋಟಿ ರೂ. ಸಾಲ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಕುಸುಗಲ್ ಗ್ರಾಮದಲ್ಲಿ ಜಲ ನಿರ್ಮಲ ಯೋಜನೆಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಸುಮಾರು ಮೂರ್ನಾಲ್ಕು ಕಿ.ಮೀ. ದೂರದಿಂದ ನೀರು ತರುವಂತಹ ಸ್ಥಿತಿ ಇದೆ. ಇದೆಲ್ಲವನ್ನೂ ನಿವಾರಿಸಲು ಜಲ ನಿರ್ಮಲ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಜಿಪಂ ಮತ್ತು ತಾಪಂ ಚುನಾವಣೆಯನ್ನು ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಲು ಸರಕಾರ ಯತ್ನಿಸುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.
ಪ. ಜಾತಿ ಮತ್ತು ಪಂಗಡ ಹಾಗೂ ಓಬಿಸಿ ವರ್ಗದವರಿಗೆ ಶೇ. 50ಕ್ಕಿಂತ ಹೆಚ್ಚಿನ ಮೀಸಲು ನೀಡಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕಾನೂನು ತಿದ್ದುಪಡಿ ಮಾಡುವ ಮೂಲಕ ಮೀಸಲು ಸಮಸ್ಯೆಯನ್ನು ಬಗೆಹರಿಸಿ ನಿಗದಿತವಾಗಿ ಚುನಾವಣೆ ನಡೆಸ ಲಾಗುವುದು ಎಂದು ಹೇಳಿದರು.