ತಮ್ಮ ಮಕ್ಕಳಿಗೆ ನೆರವಾಗಲೆಂದು ಸರಕಾರಿ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಈ ಹಗರಣದ ಸಮಗ್ರ ತನಿಖೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಕಾವತಿ ಬಡಾವಣೆಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ತಮ್ಮ ಪುತ್ರರಿಗೆ ಅನುಕೂಲವಾಗುವಂತೆ ಡಿನೋಟಿಫೈ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಕಾನೂನು ಉಲ್ಲಂಘನೆ, ಸ್ವಜನ ಪಕ್ಷಪಾತದ ಕ್ರಮಕ್ಕೆ ಸ್ವತಃ ಮುಖ್ಯಮಂತ್ರಿ ರುಜು ಹಾಕಿರುವುದನ್ನು ಈಗಾಗಲೇ ಮಾಧ್ಯಮ ಮೂಲಕ ಬಹಿರಂಗಪಡಿಸಲಾಗಿದೆ. ಆದ್ದರಿಂದ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಬೇಕಾಗಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಂತಹ ಅನೇಕ ಪ್ರಕರಣಗಳು ನಡೆದಿದ್ದು, ಈಗ ಒಂದೊಂದಾಗಿ ಹೊರಬೀಳುತ್ತಿವೆ. ರೈತರ ಜಮೀನನನ್ನು ಬೇನಾಮಿ ಹೆಸರಿನಲ್ಲಿ ಪಡೆದು ದಾಖಲೆ ತಿದ್ದಿ ನಂತರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂ.ಗೆ ಮಾರಾಟ ಮಾಡುವ ಹಗರಣ ನಡೆಯುತ್ತಿದೆ ಎಂದು ಆರೋಪಿಸಿದರು.
ಭೂ ಅಕ್ರಮ ಸೇರಿದಂತೆ ಅನೇಕ ಅಕ್ರಮಗಳಲ್ಲಿ ಬಿಜೆಪಿಯವರು ನಿಸ್ಸೀಮರಾಗಿದ್ದಾರೆ. ಸಂವಿಧಾನ ಬಾಹಿರಕೃತ್ಯ, ಅಧಿಕಾರ ದುರುಪಯೋಗ, ಸ್ವಾರ್ಥ ರಾಜಕಾರಣ ಮೀತಿ ಮಿರಿದೆ. ಸ್ವತಃ ದುಡ್ಡು ಆಸ್ತಿ ಮಾಡುವುದೇ ಮುಖ್ಯವಾಗಿದ್ದು, ಬಡವರ ಪರವಾಗಿ ಯಾವುದೊಂದು ಕಾರ್ಯಕ್ರಮಗಳನ್ನೂ ಜಾರಿ ಮಾಡುತ್ತಿಲ್ಲ. ಅದರ ವಿರುದ್ಧ ಪ್ರತಿಪಕ್ಷಗಳು ದೊಡ್ಡ ಚಳವಳಿ ನಡೆಸುವುದು ಅನಿವಾರ್ಯವಾಗಿದೆ ಎಂದು ಬಂಗಾರಪ್ಪ ಹೇಳಿದರು.