ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಹಗರಣದಲ್ಲಿ ಸಿಲುಕಿರುವ ಬಿಬಿಎಂಪಿ ಬಿಜೆಪಿ ಸದಸ್ಯ, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶ್ ಅವರನ್ನು ಕೂಡಲೇ ಅಮಾನತುಮಾಡಬೇಕೆಂದು ಆಗ್ರಹಪಡಿಸಿ ಪಾಲಿಕೆ ಸಭೆಯಲ್ಲಿ ಬುಧವಾರ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಸಭೆ ಆರಂಭವಾಗುತ್ತಿದ್ದಂತೆ ಈ ವಿಷಯವನ್ನು ಪ್ರಸ್ತಾಪಿಸಿದ ಪ್ರತಿಪಕ್ಷದ ಕಾಂಗ್ರೆಸ್ ನಾಯಕ ಎಂ.ನಾಗರಾಜ್ ಲಂಚ ಹಗರಣದಲ್ಲಿ ಸಿಲುಕಿರುವ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರನ್ನು ಅಮಾನತುಗೊಳಿಸಿರುವಂತೆ ಬಿಜೆಪಿ ಸದಸ್ಯ ಕಟ್ಟಾ ಜಗದೀಶ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಸಿಯಿದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮೇಯರ್ ಅವರು ಮಧ್ಯ ಪ್ರವೇಶಿಸಿ, ನಿಮ್ಮ ಪಕ್ಷದ ಗೋವಿಂದರಾಜು ಆರೋಪ ಸಾಬೀತಾಗಿದೆ. ಆದರೆ, ನಮ್ಮ ಪಕ್ಷದ ಸದಸ್ಯ ಕಟ್ಟಾ ಜಗದೀಶ್ ಆರೋಪ ಇನ್ನೂ ಸಾಬೀತಾಗಿಲ್ಲ. ಹಾಗಾಗಿ ಕ್ರಮಕೈಗೊಳ್ಳಲಾಗದು ಎಂದು ತಿರುಗೇಟು ನೀಡಿದರು. ಮೇಯರ್ ಮಾತಿನಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ಮೇಯರ್ ಅವರ ಮುಂದಿನ ಪೀಠದ ಬಳಿ ನಿಂತು ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಹಂತದಲ್ಲಿ ಯಾರು ಯಾರಿಗೆ ಏನು ಹೇಳುತ್ತಿದ್ದಾರೆಂಬುದು ಗೊತ್ತಾಗಲಿಲ್ಲ. ಕಟ್ಟಾ ಜಗದೀಶ್ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದು ಮೇಯರ್ ಪದೇ, ಪದೇ ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಮೇಯರ್ ಅವರ ಉತ್ತರದಿಂದ ಅಸಮಾಧಾನಗೊಂಡು ಸಭಾತ್ಯಾಗ ಮಾಡಿದರು.