ಶಿವಮೊಗ್ಗ, ಗುರುವಾರ, 30 ಸೆಪ್ಟೆಂಬರ್ 2010( 13:08 IST )
ರಾಜಕೀಯ ಕೆಸರೆಚಾಟ, ಆರೋಪ-ಪ್ರತ್ಯಾರೋಪಗಳಿಂದ ನನಗೆ ಕೆಲವು ದಿನಗಳಿಂದ ಸಮಾಧಾನವೇ ಇಲ್ಲದಂತಾಗಿದೆ. ನನ್ನ ಬುಡದಲ್ಲೇ ಏನೇನೋ ಕುತಂತ್ರ ನಡೆಯುತ್ತಿದೆ. ಅದನ್ನು ಬಹಿರಂಗವಾಗಿ ಹೇಳುವ ಹಾಗಿಲ್ಲ, ಅನುಭವಿಸುವಂತೆಯೂ ಇಲ್ಲ ಎಂಬ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗದ್ಗದಿತರಾದ ಘಟನೆ ಬುಧವಾರ ನಡೆದಿದೆ.
ಮುಖ್ಯಮಂತ್ರಿಗಳು ನಗರದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಭಾಗವಹಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಅಳಲನ್ನು ಈ ರೀತಿಯಾಗಿ ತೋಡಿಕೊಂಡಿದ್ದರು.
ವಿರೋಧ ಪಕ್ಷದವರು ಒಂದಿಲ್ಲೊಂದು ಕಾರಣ ಹಿಡಿದು ಈವರೆಗೆ ಸುಮಾರು ನೂರು ಬಾರಿ ರಾಜೀನಾಮೆ ಕೇಳಿರಬಹುದು. ಹಾಗಾದ್ರೆ ನನ್ನ ರಾಜೀನಾಮೆಯಿಂದ ಎಲ್ಲವೂ ಸರಿ ಹೋಗುತ್ತದೆಯೇ ? ಇಲ್ಲ ವಿರೋಧ ಪಕ್ಷದವರು ಆಡಳಿತ ನಡೆಸಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆಯೇ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದವರು ಸಮರ್ಥರಾಗಿರಬೇಕು ಎಂದು ನಂಬುವವನು ನಾನು. ಆದರೆ ಪದೇ, ಪದೇ ಆರೋಪ ಮಾಡುವ ಮೂಲಕ ನನ್ನನ್ನು ಸಿಕ್ಕಿಸುವ ಯತ್ನದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಎಲ್ಲರೂ ಎಲ್ಲರ ವಿಶ್ವಾಸ ಕಳೆದುಕೊಳ್ಳುವಂತಹ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದರು.
ಭ್ರಷ್ಟಾಚಾರ ಎಂಬುದು ಕ್ಯಾನ್ಸರ್ ಇದ್ದಂತೆ, ಈಗ ದಿನಬೆಳಗಾದರೆ ಕಾಮಲ್‌ವೆಲ್ತ್ ಕ್ರೀಡಾಕೂಟದಲ್ಲಿನ ಭ್ರಷ್ಟಾಚಾರದ ಬಗ್ಗೆಯೇ ಪ್ರಸ್ತಾಪವಾಗುತ್ತಿದೆ. ಪ್ರಧಾನಿ ಅವರ ಮೂಗಿನಡಿಯಲ್ಲೇ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದೆ. ಆ ನಿಟ್ಟಿನಲ್ಲಿ ಈ ಭ್ರಷ್ಟಾಚಾರದ ಪಿಡುಗನ್ನು ಕಿತ್ತೊಗೆಯಲು ಯುವಪೀಳಿಗೆ ಮುಂದಾಗಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.