ಕಾಡಿನಲ್ಲಿ ಕುಳಿತು ಏನ್ಮಾಡ್ಲಿ; ನಕ್ಸಲ್ ವೆಂಕಟೇಶ್ ಶರಣಾಗತಿ
ಚಿಕ್ಕಮಗಳೂರು, ಗುರುವಾರ, 30 ಸೆಪ್ಟೆಂಬರ್ 2010( 13:10 IST )
ಸರಕಾರದ ವಿರುದ್ಧ ಸೆಡ್ಡು ಹೊಡೆದು ಶಸ್ತ್ರಾಸ್ತ್ರ ಹೆಗಲಿಗೇರಿಸಿಕೊಂಡು ನಕ್ಸಲ್ ಹೋರಾಟಕ್ಕೆ ಧುಮುಕಿದ್ದ ಅಗಳಗಂಚಿ ವೆಂಕಟೇಶ್ ಇದೀಗ ಸರಕಾರದ ಅಭಿವೃದ್ಧಿ ಯೋಜನೆಗಳಿಂದ ತೃಪ್ತಿ ಹೊಂದಿದ ಪರಿಣಾಮ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗಿರುವ ಘಟನೆ ನಡೆದಿದೆ. ಇದು ರಾಜ್ಯದ ನಕ್ಸಲ್ ಇತಿಹಾಸದಲ್ಲಿ ಶರಣಾಗತಿಯ ಮೊದಲ ಪ್ರಕರಣವಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟೇಶ್, ಕಾಡಿನಲ್ಲಿ ಕುಳಿತು ಪ್ರಯೋಜನವಿಲ್ಲ ಎಂಬ ಅರಿವಾಗಿದೆ. ಹಾಗಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು, ಸಂವಿಧಾನಾತ್ಮಕ ರೀತಿಯಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಪದವೀಧರ ವೆಂಕಟೇಶ್ ತನ್ನ ಊರಿನ ಅವ್ಯವಸ್ಥೆ, ಕುದುರೆಮುಖ ಉದ್ಯಾನ ವಿರೋಧಿಸಿ ಕಾಮ್ರೇಡ್ ನೀಲಗುಳಿ ಪದ್ಮನಾಭ ಅವರ ನಾಯಕತ್ವದಲ್ಲಿ 1990ರಲ್ಲಿ ನಾವು ನಡೆಸಿದ ಹೋರಾಟಕ್ಕೆ ಸರಕಾರಕ್ಕೆ ಬೆಲೆ ಕೊಡಲಿಲ್ಲ. ಅರಣ್ಯ ಇಲಾಖೆ ಮೂಡಿಗೆರೆ ತಾಲೂಕಿನ ಗಿರಿಜನರ ಮೇಲೆ ಅನಾವಶ್ಯಕವಾಗಿ ಪ್ರಕರಣ ದಾಖಲಿಸಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಸಶಸ್ತ್ರ ಹೋರಾಟ ಅನಿವಾರ್ಯ ಎಂದು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಾಗಿ ವಿವರಿಸಿದರು.
ಕೊಪ್ಪ ಡಿವೈಎಸ್‌ಪಿ ಮತ್ತು ಶೃಂಗೇರಿ ತಹಸೀಲ್ದಾರ್ ಮಾನವೀಯ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜನರ ಬಗ್ಗೆ ಕಾಳಜಿ ಇದೆ. ಆ ನೆಲೆಯಲ್ಲಿ ನಾನು ಕಾಡಿನಲ್ಲಿ ಕುಳಿತು ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮನವರಿಕೆಯಾಗಿದೆ. ಇದರಿಂದಾಗಿ ತಾನು ಶರಣಾಗಲು ನಿರ್ಧರಿಸಿದೆ ಎಂದು ವೆಂಕಟೇಶ್ ತಿಳಿಸಿದರು.
ನನ್ನ ವಿರುದ್ಧ ಎಲ್ಲ ಪ್ರಕರಣಗಳನ್ನೂ ವಾಪಸ್ ತೆಗೆದುಕೊಳ್ಳಬೇಕು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಹೆಚ್ಚು ಒತ್ತು ನೀಡಬೇಕು. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳ ನೇಮಕವಾಗಬೇಕು, ಶರಣಾದ ನಕ್ಸಲ್ ಹೋರಾಟಗಾರರಿಗೆ ಪರಿಹಾರ ರೂಪದಲ್ಲಿ ಭೂಮಿ ಹಾಗೂ ಹಣ ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.