ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಯೋಧ್ಯೆ ತೀರ್ಪನ್ನು ಮುಕ್ತವಾಗಿ ಸ್ವೀಕರಿಸೋಣ: ಮೃತ್ಯುಂಜಯ ಸ್ವಾಮೀಜಿ (Jafar Shariff | Court | Ayodhya | Congress | Kudala sangama)
ಅಯೋಧ್ಯೆ ತೀರ್ಪನ್ನು ಮುಕ್ತವಾಗಿ ಸ್ವೀಕರಿಸೋಣ: ಮೃತ್ಯುಂಜಯ ಸ್ವಾಮೀಜಿ
ಕೂಡಲಸಂಗಮ, ಗುರುವಾರ, 30 ಸೆಪ್ಟೆಂಬರ್ 2010( 14:58 IST )
ಅಯೋಧ್ಯೆ ಒಡೆತನ ಕುರಿತಂತೆ ಅಲಹಾಬಾದ್ ನ್ಯಾಯಾಲಯ ನೀಡುವ ಅಂತಿಮ ತೀರ್ಪನ್ನು ನಾವೆಲ್ಲರೂ ಶಾಂತಿಯಿಂದ ಸ್ವೀಕರಿಸೋಣ, ಬಸವ, ಬುದ್ಧ ಹುಟ್ಟಿದ ನಾಡಿನಲ್ಲಿ ಅಶಾಂತಿಗೆ ಅವಕಾಶ ಕೊಡಬಾರದು ಎಂದು ಕೂಡಲಸಮಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.
ಇಲ್ಲಿನ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ನಡೆದ ಸರ್ವಧರ್ಮದ ಶಾಂತಿ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.
ನ್ಯಾಯಾಲಯ ನೀಡುವ ತೀರ್ಪಿಗೆ ನಾವೆಲ್ಲರೂ ಮನ್ನಣೆ ಕೊಡಬೇಕು, ಯಾರು ವಿಜಯೋತ್ಸವ ಆಚರಿಸಬಾರದು ಎಂದು ಹೇಳಿದರು. ಮುಸ್ಲಿಂ ಧರ್ಮ ಗುರು ಮಹ್ಮದ್ ಯೂಸುಫ್ ಕುಣ್ಣಿ, ಬೌದ್ಧ ಧರ್ಮ ಗುರು ಬಂತೇಜಿ ಬೋ ಪ್ರಜ್ಞ ಹಾಗೂ ಕ್ರೈಸ್ತ ಧರ್ಮಗುರು ರೆವರೆಂಡ್ ಫಾದರ್ ರಾಚಪ್ಪ ಹಾಗೂ ಗುರುಮಹಾಂತ ಶ್ರೀಗಳು ಮಾತನಾಡಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ತೀರ್ಪು ಸ್ವಾಗತಿಸಿ, ಶಾಂತಿ ಕಾಪಾಡಿ: ಜಾಫರ್ ಶರೀಫ್ ವಿದೇಶಿ ಬಂಡವಾಳದಾರರು ದೇಶದಲ್ಲಿ ಹೆಚ್ಚೆಚ್ಚು ಬಂಡವಾಳ ಹೂಡುತ್ತಿರುವ ಈ ಸಮಯದಲ್ಲಿ ನಾವು ಶಾಂತಿ, ಸಂಯಮ ಕಾಪಾಡಿಕೊಳ್ಳಬೇಕಿದೆ. ಸರ್ವಜನಾಂಗದ ಶಾಂತಿಯ ತೋಟ ಎಂಬ ಖ್ಯಾತಿಯನ್ನು ರಾಷ್ಟ್ರ ಉಳಿಸಿಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ತಿಳಿಸಿದ್ದಾರೆ.
ಸಂವಿಧಾನದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಬಗ್ಗೆ ಜನತೆ ವಿಶ್ವಾಸವಿಟ್ಟಿದ್ದಾರೆ. ನ್ಯಾಯಾಂಗದ ತೀರ್ಪು ಗೌರವಿಸಿದರೆ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತೆ. ತೀರ್ಪು ಯಾರ ಪರವಾಗಿ ಬಂದರೂ ಸ್ವಾಗತಿಸಿ, ಶಾಂತಿ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.