ಬೆಂಗಳೂರು, ಗುರುವಾರ, 30 ಸೆಪ್ಟೆಂಬರ್ 2010( 17:41 IST )
ದೇಶಾದ್ಯಂತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಕುರಿತು ತಲೆಕೆಡಿಸಿಕೊಂಡಿದ್ದರೆ, ಉತ್ತರ ಕರ್ನಾಟಕದ ಪುಟ್ಟ ಹಳ್ಳಿಯೊಂದರಲ್ಲಿ ಮುಸ್ಲಿಮರಿಗೆ ಹಿಂದೂಗಳೇ ಮಸೀದಿ ಕಟ್ಟಲು ಮುಂದಾಗುವ ಮೂಲಕ ಕೋಮುಸೌಹಾರ್ದತೆ ಮೆರೆದಿರುವ ಅಂಶ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕದ ಪುರ್ತಗೇರಿಯಲ್ಲಿ ಪ್ರವಾಹದಿಂದ ಕುಸಿದಿದ್ದ ಮಸೀದಿ ಪುನರ್ ನಿರ್ಮಾಣಕ್ಕೆ ಹಿಂದೂಗಳು ಸಹಾಯ ಮಾಡುವ ಮೂಲಕ ಕೋಮುಸೌಹಾರ್ದತೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಶತಮಾನದಷ್ಟು ಹಳೆಯದಾದ ಮಸೀದಿ ಸಂಪೂರ್ಣವಾಗಿ ಶಿಥಿಲಗೊಂಡಿತ್ತು. ಆದರೆ ಪುರ್ತಗೇರಿ ನಗರದಲ್ಲಿ 150 ಮನೆಗಳಿದ್ದು, ಇದರಲ್ಲಿ 10 ಮನೆ ಮಾತ್ರ ಮುಸ್ಲಿಮರದ್ದು. ಅವರೆಲ್ಲ ಆರ್ಥಿಕವಾಗಿ ತುಂಬಾ ಬಡವರಾಗಿದ್ದರು. ಆ ನಿಟ್ಟಿನಲ್ಲಿ ಹಿಂದುಗಳೆ ವಂತಿಗೆ ಸಂಗ್ರಹಿಸಿ ಮಸೀದಿ ಕಟ್ಟಿಕೊಡುವ ಮೂಲಕ ಹಿಂದೂ-ಮುಸ್ಲಿಮ್ ಬಾಂಧವ್ಯಕ್ಕೆ ನಾಂದಿ ಹಾಡಿದ್ದಾರೆ.
ಉತ್ತರ ಕರ್ನಾಟಕ ಗದಗ ಸಮೀಪದ ಪುರ್ತಗೇರಿ ಹಳ್ಳಿಯಲ್ಲಿರುವ ಹತ್ತು ಮುಸ್ಲಿಮ್ ಕುಟುಂಬಗಳು ಕೃಷಿ ಕೂಲಿಕಾರರು. ಆದರೆ ಅವರ ದುಡಿಮೆಯಿಂದ ಮಸೀದಿ ಪುನರ್ ನಿರ್ಮಾಣ ಕಾರ್ಯ ಅಸಾಧ್ಯವಾಗಿತ್ತು. ಅಂತೂ ಮುಸ್ಲಿಮ್ ಬಾಂಧವರ ಮಸೀದಿ ಪುನರ್ ನಿರ್ಮಾಣಕ್ಕೆ ಹಿಂದೂಗಳು ಸುಮಾರು ಒಂದು ಲಕ್ಷ ರೂಪಾಯಿ ಸಂಗ್ರಹಿಸಿದ್ದರು. ಇದರಲ್ಲಿ ಕೆಲವು ಹಿಂದೂಗಳು ವಂತಿಗೆ ನೀಡದಿದ್ದರೂ ಕೂಡ ಮಸೀದಿ ನಿರ್ಮಾಣ ಕಾರ್ಯದಲ್ಲಿ ಸ್ವಯಂ ಆಗಿ ತೊಡಗಿಕೊಂಡಿದ್ದರು.
ಇದೀಗ ಹಿಂದೂಗಳ ನೆರವಿನಿಂದ ಪುನರ್ ನಿರ್ಮಾಣವಾಗುತ್ತಿರುವ ಮಸೀದಿ ಕೆಲಸ ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಒಟ್ಟಾರೆ ಅಯೋಧ್ಯೆಯಲ್ಲಿನ ವಿವಾದ ಹಿಂದೂ-ಮುಸ್ಲಿಮರಲ್ಲಿ ಕೋಮುದಳ್ಳುರಿಗೆ ಕಾರಣವಾಗಿದ್ದರೆ, ಇತ್ತ ಉತ್ತರ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಮರು ಕೋಮು ಸೌಹಾರ್ದತೆ ಸಾರಿರುವುದು ಮಾದರಿಯಾಗಿದೆ.