ಯಡಿಯೂರಪ್ಪನವರಿಗೆ ರೇವೂರ ಗೌಡರ ಶಾಪ ತಟ್ಟಿದೆ. ರೇವೂರ ಕುಟುಂಬಕ್ಕೆ ಅನಗತ್ಯವಾಗಿ ಮಾಡಿದ ಅನ್ಯಾಯಕ್ಕೆ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪನವರು ಪ್ರತಿಫಲವನ್ನು ಉಣ್ಣಲೇಬೇಕಲ್ಲವೇ? ಎಂದು ಗುಲ್ಬರ್ಗ ದಕ್ಷಿಣ ಕ್ಷೇತ್ರದ ಜೆಡಿಎಸ್ ಶಾಸಕರಾದ ಅರುಣಾ ಪಾಟೀಲ್ ರೇವೂರ್ ಅವರು ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ರೀತಿ ಇದಾಗಿದೆ.
ಯಡಿಯೂರಪ್ಪ ಮತ್ತು ಈಶ್ವರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿರುವುದರಿಂದಲೇ ಬಿಜೆಪಿ ಶಾಸಕರು ಇಂದು ಅವರ ವಿರುದ್ಧ ಸೆಡ್ಡು ಹೊಡೆದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ (ಚಂದ್ರಶೇಖರ ಪಾಟೀಲ್ ರೇವೂರ) ಯಜಮಾನರು ಮೃತರಾದ ನಂತರವೂ ಈ ಇಬ್ಬರೂ ಮುಖಂಡರು ತಮ್ಮ ಕುಟುಂಬದ ಮೇಲಿದ್ದ ದ್ವೇಷವನ್ನು ಮುಂದುವರಿಸಿದರು. ಪರಿಣಾಮವಾಗಿ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಮತದಾರ ಇವರಿಗೆ ತಕ್ಕ ಪಾಠ ಕಲಿಸಿದ. ಅನ್ಯಾಯವನ್ನು ಸಹಿಸಲಾಗದು ಎನ್ನುವುದನ್ನು ತಮ್ಮ ಜನ ತೋರಿಸಿಕೊಟ್ಟರು ಎಂದರು.
ಇಲ್ಲಿ ಮಾಡಿದ ಪಾಪಕ್ಕೆ ಇಲ್ಲಿಯೇ ಪ್ರಾಯಶ್ಚಿತ ಪಡಬೇಕು ಎನ್ನುವುದನ್ನು ಯಡಿಯೂರಪ್ಪ ಮತ್ತು ಈಶ್ವರಪ್ಪನವರು ಅರಿತುಕೊಳ್ಳಬೇಕು, ನಿಷ್ಠಾವಂತರಿಗೆ ಬಿಜೆಪಿಯದಲ್ಲಿ ಈಗ ಅವಕಾಶ ಇಲ್ಲ ಎನ್ನುವುದನ್ನು ಮೂಲ ಬಿಜೆಪಿ ಶಾಸಕರು ಅರಿತುಕೊಂಡು ತಮ್ಮ ಮುಂದಿನ ಹೆಜ್ಜೆ ಇಡುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದರು.