ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಮತ್ತೊಂದು ಮರು ಚುನಾವಣೆಗೆ ಸಜ್ಜಾಗಿದ್ದು, ತವರು ಕ್ಷೇತ್ರದಲ್ಲಿ ತಾನು ಕಳೆದುಕೊಂಡ ವಜ್ರದ ಹರಳನ್ನು ಹುಡುಕಲು ಜೆಡಿಎಸ್ ಯತ್ನಿಸುತ್ತಿದೆ!
ಎಂ.ಸಿ. ಅಶ್ವತ್ಥ್ 'ತೆನೆಹೊತ್ತ' ಹೊರೆಯನ್ನು (ಜೆಡಿಎಸ್ ಚಿಹ್ನೆ) ಬಿಸಾಡಿ ಹೋದ ನಂತರ ಜೆಡಿಎಸ್, ಸಮರ್ಥ ಅಭ್ಯರ್ಥಿಯ ಹುಡುಕಾಟಕ್ಕೆ ಈಗಾಗಲೇ ತಾಲೀಮು ನಡೆಸುತ್ತಿದ್ದು, ಮತ್ತೊಮ್ಮೆ ಕ್ಷೇತ್ರ ಪ್ರವೇಶಿಸುವಂತೆ ಕೇಂದ್ರದ ಮಾಜಿ ಸಚಿವ, ಚಿತ್ರನಟ ಅಂಬರೀಷ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮೂಲವೊಂದು ತಿಳಿಸಿದೆ.
ಕಾಂಗ್ರೆಸ್ ಮುಖಂಡರಾಗಿರುವ ಅಂಬರೀಷ್ ಅವರನ್ನು ಜೆಡಿಎಸ್‌ಗೆ ಕರೆತರಲು ಮುಖಂಡರು ಉತ್ಸುಕರಾಗಿದ್ದು, ಈ ಕುರಿತಂತೆ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಅಂಬಿ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಬರುವ ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಮಣೆ ಹಾಕುವ ಸಾಧ್ಯತೆ ತೀರಾ ಕಡಿಮೆ. ಈ ಬೆಳವಣಿಗೆಯಿಂದಾಗಿ ಅಶ್ವತ್ಥ್ ನಂತರ ತಮಗೇ ಪಟ್ಟ ಎಂದು 'ಬಾಸಿಂಗ' ಕಟ್ಟಿಕೊಂಡು ಕುಳಿತಿದ್ದವರಿಗೆ ಇಂಗು ತಿಂದ ಅನುಭವವಾಗಿದೆ.
ಮುಖ್ಯಮಂತ್ರಿಯಾಗಿದ್ದ ದೇವೇಗೌಡರಿಗೆ ಪ್ರಧಾನಿಯಾಗುವ ಯೋಗ ಬಂದಾಗ, ಅವರ ರಾಜೀನಾಮೆಯಿಂದ ತೆರವಾದ ರಾಮನಗರ ವಿಧಾನಸಭೆ ಕ್ಷೇತ್ರಕ್ಕೆ 1996ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾದಳದಿಂದ ಅಂಬರೀಷ್ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ವಿರುದ್ಧ ಸೋಲುಂಡು ಬರಿಗೈಲಿ ಮರಳಿದರು. ನಂತರ 1998ರಲ್ಲಿ ಜನತಾದಳದಿಂದ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದರು. ಬಳಿಕ ಕಾಂಗ್ರೆಸ್ ಪಾಳಯಕ್ಕೆ ಅಂಬರೀಷ್ ಸೇರ್ಪಡೆಗೊಂಡಿದ್ದರು. ಆದರೂ 2009ರಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆ ವೇಳೆಯೂ ಅಂಬಿಯನ್ನು ಕಣಕ್ಕಿಳಿಸಲು ಜೆಡಿಎಸ್ ಪ್ರಯತ್ನಿಸಿತ್ತು. ಆದರೆ ಅದು ಫಲ ನೀಡಿರಲಿಲ್ಲವಾಗಿತ್ತು.
ಇದೀಗ ಒಂದು ವೇಳೆ ಮಂಡ್ಯದ ಗಂಡು ಕಣಕ್ಕಿಳಿಯಲು ಹಿಂದೇಟು ಹಾಕಿದರೆ, ತಮ್ಮ ಕುಟುಂಬದ ಸದಸ್ಯರನ್ನೇ ಸ್ಪರ್ಧೆಗಿಳಿಸಲು ಎಚ್‌ಡಿಕೆ ತಯಾರಿ ನಡೆಸುತ್ತಿದ್ದಾರೆ. ಈ ಮೂಲಕ ಕ್ಷೇತ್ರದ ಜನತೆ ಗೌಡರ ಕುಟುಂಬದ ಮೇಲಿಟ್ಟಿರುವ ನಂಬಿಕೆಯನ್ನು ಒರೆಗೆ ಹಚ್ಚುವ ತಂತ್ರ ಅನುಸರಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಂತೆ ಭವಾನಿ ರೇವಣ್ಣ ಅಥವಾ ಎಚ್.ಡಿ. ಬಾಲಕೃಷ್ಣೇಗೌಡ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.