ರಾಜ್ಯದ 65ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಬಿಜೆಪಿ ಶಾಸಕರು, ಗಣಿ ಧಣಿಗಳು ಮತ್ತವರ ಸಹವರ್ತಿಗಳ ಮೇಲೆ ಸೋಮವಾರ ದಿನವಿಡೀ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದರ ಹಿಂದೆ, ಬಿಜೆಪಿಯನ್ನು ಹೇಗಾದರೂ ಮಟ್ಟ ಹಾಕಬೇಕೆಂಬ ದುರುದ್ದೇಶವಿರುವ ಕಾಂಗ್ರೆಸ್ ಕೈವಾಡವಿದೆ ಎಂಬ ಆರೋಪಗಳು ಕೇಳಿಬರುತ್ತಿರುವಂತೆಯೇ, ಕಾಂಗ್ರೆಸ್ ಪಕ್ಷವು ಇದನ್ನು ನಿರಾಕರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಆದಾಯ ತೆರಿಗೆ ದಾಳಿಯಲ್ಲಿ ಕಾಂಗ್ರೆಸ್ ಕೈವಾಡವಿಲ್ಲ ಎಂದು ಹೇಳಿದ್ದಾರೆ.
ಆದರೆ, ಗಣಿ ಧಣಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಕರುಣಾಕರ ರೆಡ್ಡಿ ಅವರ ಹಾಗೂ ಅವರ ಆಪ್ತರಿಗೆ ಸೇರಿದ ನಿವಾಸಗಳಿಗೆ, ಕಚೇರಿಗಳಿಗೆ ದಾಳಿ ನಡೆಸಲಾಗಿದ್ದು, ಗಣಿ ಧಣಿಗಳೇ ಆಗಿರುವ ಕಾಂಗ್ರೆಸ್ ಶಾಸಕರ ಮನೆಗಳಿಗೆ ಯಾವುದೇ ದಾಳಿ ನಡೆದಿಲ್ಲ. ಇದನ್ನು ಮನಗಂಡಿರುವ ಬಿಜೆಪಿ ಕೆಂಡಾಮಂಡಲವಾಗಿದ್ದು, ಕೇಂದ್ರದ ವಿರುದ್ಧ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಈ ಕುರಿತು, ಐಟಿ ದಾಳಿ ಕುರಿತು ಮೊದಲೇ ಮುನ್ಸೂಚನೆ ಪಡೆದಿದ್ದ ಧನಂಜಯ್ ಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಗೆಲ್ಲಲಾಗದ ಕಾಂಗ್ರೆಸ್ ಹತಾಶೆಯಿದು... ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನಿರ್ಮಲಾ ಸೀತಾರಾಮನ್, "ಬಿಜೆಪಿ ಸರಕಾರವನ್ನು ಹೇಗಾದರೂ ಮಾಡಿ ಉರುಳಿಸಬೇಕೆಂಬ ಪ್ರಯತ್ನವೊಂದು ನಡೆಯುತ್ತಿದೆ. ಅವರು ಶಾಸಕರಿಗೆ ಲಂಚ ನೀಡಲೂ ಪ್ರಯತ್ನಿಸಿದರಲ್ಲದೆ, ರಾಜ್ಯಪಾಲರನ್ನು ತಮ್ಮ ಕಡೆಗೆ ಮಾಡಿಕೊಂಡು ಸರಕಾರ ಉರುಳಿಸಲು ನೋಡಿದರು. ಈ ಪ್ರಯತ್ನಗಳು ವಿಫಲವಾದಾಗ, ಈ ಕುತಂತ್ರದ ಮಾರ್ಗ ಅವುಸರಿಸಿದ್ದಾರೆ. ಇದು ಕಾಂಗ್ರೆಸ್‌ನ ಮತ್ತೊಂದು ರಾಜಕೀಯ ನಡೆ ಎಂಬುದು ನಮಗೆ ಅರ್ಥವಾಗಿದೆ. ಈ ವರ್ಷ ಒಂದೇ ಒಂದು ಉಪ ಚುನಾವಣೆಯನ್ನೂ ಗೆಲ್ಲಲಾಗದ ಕಾಂಗ್ರೆಸ್‌ನ ಹತಾಶೆ ಇಲ್ಲಿ ಸ್ಪಷ್ಟವಾಗುತ್ತಿದೆ" ಎಂದಿದ್ದಾರೆ.