ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ನೀಡಿರುವ ಹೇಳಿಕೆಯನ್ನು ಗಮನಿಸಿದ್ದು, ಅದು ನಮ್ಮ ಪಕ್ಷದ ವಿಚಾರ. ಹೀಗಾಗಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆಯೇ ಹೊರತು ಬಹಿರಂಗವಾಗಿ ಅಲ್ಲ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಕೇಂದ್ರೀಯ ವಿವಿ ಅಡಿಗಲ್ಲು ಸಮಾರಂಭ ಕುರಿತು ಜಿಲ್ಲಾಧಿಕಾರಿ ಇತರರ ಜತೆಗೆ ಪೂರ್ವಭಾವಿ ಸಭೆಯ ಕಾಲಕ್ಕೆ ತಮ್ಮನ್ನು ಭೇಟಿಯಾದ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ಗುತ್ತೇದಾರ ಭಾವನೆಗಳನ್ನು ಅರಿತಿದ್ದೇನೆ ಎಂದರು.
ಗಣಿ ಸುರಕ್ಷತಾ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇನ್ನೂ 15 ದಿನಗಳಲ್ಲಿ ಸ್ಥಳ ಅಂತಿಮಗೊಳ್ಳಲಿದೆ ಎಂದು ಸಚಿವರು ತಿಳಿಸಿದರು. ರಾಜ್ಯ ಸರಕಾರದ ಜಾಗವನ್ನು ಕೇಳಲಾಗಿತ್ತು, ಆದರೆ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರ ಹೇಳುತ್ತಿರುವುದರಿಂದ ಖಾಸಗಿಯವರಿಂದ ಕಟ್ಟಡ ಬಾಡಿಗೆ ಪಡೆಯಲು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಕರ್ನಾಟಕದ ಪೂರ್ಣ ಭಾಗ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ಮತ್ತು ಪಾಂಡಿಚೇರಿ ಸ್ವಲ್ಪ ಭಾಗ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಸೇರಿಸಿ ಹೊಸದಾಗಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
ಈ ಮೊದಲು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಗೋವಾ ಸೇರಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲಸ ಕಾರ್ಯಗಳಿಗೆ ಸಮೀಪವಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಬೆಂಗಳೂರು ಗಣಿ ಸುರಕ್ಷತಾ ಕಚೇರಿಗೆ ಸೇರಿಸಲಾಗಿದೆ ಎಂದರು.