ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಗಡಿಭಾಗ ಬೆಳಗಾವಿಯಲ್ಲೇ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದರು ತಿಳಿಸಿದ್ದಾರೆ.
ಜಿಪಂ ಸಭಾ ಭವನದಲ್ಲಿ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸ್ಥಳ ಬದಲಾವಣೆ ಕುರಿತು ಆತಂಕ ಬೇಡ. ಈ ಬಗ್ಗೆ ಯಾರೇ ವಿರೋಧ ವ್ಯಕ್ತಪಡಿಸಿದರೂ ಅವರನ್ನು ದೂರವಿಟ್ಟು ಸಮ್ಮೇಳನ ನಡೆಸಲಾಗುವುದು ಎಂದರು.
ಸಮ್ಮೇಳನ ಸಿದ್ಧತೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲಾಗದು. ಬೆಳಗಾವಿಯಲ್ಲಿ ಕೆಲವರು ಭಾಷೆ ಹೆಸರಿನಲ್ಲಿ ಗಲಾಟೆ ನಡೆಸುತ್ತಿದ್ದು, ಅವರಿಗೆಲ್ಲ ಸಮ್ಮೇಳನ ತಕ್ಕ ಪಾಠವಾಗಲಿದೆ. ಕನ್ನಡಿಗರು, ಸಾಹಿತಿಗಳು ಸ್ಮರಿಸುವಂತಹ ಸಮ್ಮೇಳನ ಇದಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಆಸರೆ ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು ಫೆಬ್ರುವರಿ ಅಂತ್ಯದೊಳಗೆ ಜಿಲ್ಲೆಯ ಎಲ್ಲ ಆಸರೆ ಮನೆಗಳ ಕಾಮಗಾರಿ ಪೂರ್ಣಗೊಂಡು ಸಂತ್ರಸ್ತರಿಗೆ ಮನೆಗಳು ಹಸ್ತಾಂತರಗೊಳ್ಳಲಿವೆ ಎಂದರು.
ಈಗಾಗಲೇ ಅನೇಕ ಕಡೆಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಹಂತ ತಲುಪಿದ್ದು ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ ಸರಕಾರಕ್ಕೆ ಹಸ್ತಾಂತರಿಸುವುದಾಗಿ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಸಂಸ್ಥೆಗಳು ತಿಳಿಸಿವೆ. ಕೆಲ ಕಡೆಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅವುಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.