ಪಕ್ಷಾಂತರ ಹಾವಳಿಯಿಂದ ಕಲುಷಿತಗೊಂಡಿರುವ ರಾಜಕೀಯ ಪಕ್ಷಗಳ ಶುದ್ದೀಕರಣ ಈಗಿನ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗಳ ಸುಗಮ ಆಡಳಿತ ನಿರ್ವಹಣೆಗೆ ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಜೆಡಿಎಸ್‌ನಂತಹ ಪಕ್ಷಗಳು ಅಡ್ಡಿಯಾಗಿವೆ. ಆದ್ದರಿಂದ ದ್ವಿಪಕ್ಷ ಪ್ರಜಾಸತ್ತೆ ದೃಷ್ಟಿಯಿಂದ ಇಂಥ ಪ್ರಾದೇಶಿಕ ಪಕ್ಷಗಳನ್ನು ನಿರ್ಮೂಲನೆ ಮಾಡುವುದು ಒಳ್ಳೆಯದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಜಿಲ್ಲೆಯ ಹಾನಗಲ್‌ಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಪಕ್ಷಾಂತರ ಮಾಡುತ್ತಿರುವ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆಯಂಥವರು ಮೊದಲು ಯಾವ ಪಕ್ಷದಲ್ಲಿ ಇದ್ದರು, ಅಲ್ಲಿಂದ ಮತ್ತೊಂದು ಪಕ್ಷಕ್ಕೆ ಹೇಗೆ ಜಿಗಿದಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ಗಮನಿಸಬೇಕಾಗಿದೆ. ಇಂತಹ ಪಕ್ಷಾಂತರಿಗಳನ್ನು ಮೊದಲು ದೂರವಿಟ್ಟು ಕಾಂಗ್ರೆಸ್ ತನ್ನನ್ನು ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ ಎಂದರು.
ರಾಷ್ಟ್ರೀಯ ಪಕ್ಷದ ಶುದ್ದೀಕರಣಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯಂತೆ ಕ್ರಮ ಕೈಗೊಂಡು ಶಿಸ್ತು ತರುವತ್ತ ಬಿಜೆಪಿ ಮತ್ತು ಕಾಂಗ್ರೆಸ್ ಕೇಂದ್ರಮಟ್ಟದಲ್ಲಿ ಚಿಂತಿಸಬೇಕಾಗಿದೆ. ಈ ಮೂಲಕ ಪ್ರಾದೇಶಿಕ ಪಕ್ಷಗಳ ನಿರ್ಮೂಲನೆಗೆ ಕೈಜೋಡಿಸಲು ಕೋರಿದರು.
ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ವಿವಿಧ ಸ್ಥಾನಮಾನ ಮತ್ತು ಉಪಮುಖ್ಯಮಂತ್ರಿ ಅಧಿಕಾರ ಅನುಭವಿಸಿ ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಜಿಗಿದಿದ್ದಾರೆ. ಇವರು ಪಕ್ಷಾಂತರಿ ಅಲ್ಲವೆ? ದೇಶಪಾಂಡೆಯಂಥವರದ್ದು ಪಕ್ಷಾಂತರ ಅಲ್ಲವೆ? ಇಂಥವರಿಗೆ ಪಕ್ಷಾಂತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಮುಖ್ಯಮಂತ್ರಿ ಕನಸು ಕಾಣುತ್ತಿರುವ ಸಿದ್ದರಾಮಯ್ಯ ವಾಮಮಾರ್ಗದಲ್ಲಿ ಬಿಜೆಪಿ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.