ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆರ್.ವಿ.ನಿರ್ಗಮನ; ಜಿ.ಪರಮೇಶ್ವರ್‌ಗೆ ಕೆಪಿಸಿಸಿ ಸಾರಥ್ಯ (G.Parameshwar | KPCC | Shiv kumar | RV Desh pandy | Sonia gandhi)
Bookmark and Share Feedback Print
 
PR
ಮಾಜಿ ಸಚಿವ, ಹಾಲಿ ಶಾಸಕ ಜಿ.ಪರಮೇಶ್ವರ್ ಅವರನ್ನು ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಐಸಿಸಿ ಮಂಗಳವಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಹಿಂದೆ ಆರ್.ವಿ.ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು.

ಕೊರಟಗೆರೆ ಶಾಸಕರಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಜಿ.ಪರಮೇಶ್ವರ್ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕೆಪಿಸಿಸಿ ಅಧ್ಯಕ್ಷಗಾದಿಗೆ ಹಲವು ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದರು. ಆದರೂ ಜಿ.ಪರಮೇಶ್ವರ್ ಅವರು ಅವಿರೋಧವಾಗಿ ಆಯ್ಕೆಯಾದಂತಾಗಿದೆ.

ದಲಿತ ಸಮುದಾಯದ ಜಿ.ಪರಮೇಶ್ವರ್ ಅವರು ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯವರು, ಎಂಎಸ್ಸಿ ಪದವೀಧರರರಾಗಿರುವ ಅವರು 1989ರಲ್ಲಿ ಮೊದಲ ಬಾರಿಗೆ ಮಧುಗಿರಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 1994, 1999 ಹಾಗೂ 2004ರಲ್ಲಿ ಮಧುಗಿರಿಯಿಂದ ಶಾಸಕರಾಗಿದ್ದ ಪರಮೇಶ್ವರ್ ಅವರು 2008ರಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎಸ್.ಎಂ.ಕೃಷ್ಣ ಸರಕಾರದಲ್ಲಿ ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕೆಪಿಸಿಸಿ ಪಟ್ಟ ಖುಷಿ ತಂದಿದೆ-ಪರಮೇಶ್ವರ್: ಕೆಪಿಸಿಸಿ ಅಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ ಎಂದು ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ ಅವರು, ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಮುಖಂಡರ ಸಹಕಾರದೊಂದಿಗೆ ಪಕ್ಷವನ್ನು ಸಂಘಟಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ನೇಮಕ ಸಂತೋಷ ಕೊಟ್ಟಿದೆ-ಡಿಕೆಶಿ:ಕಾಂಗ್ರೆಸ್‌ನ ನಿಷ್ಠಾವಂತ ಮುಖಂಡರಾಗಿರುವ ಜಿ.ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಸಂತೋಷ ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಬೇಕೆಂದು ಆಶಿಸಿದ್ದೆ. ಅದೇ ರೀತಿ ಹೈಕಮಾಂಡ್ ಆಯ್ಕೆ ಮಾಡಿರುವುದು ಸೂಕ್ತ ನಿರ್ಧಾರವಾಗಿದೆ ಎಂದರು. ಅಲ್ಲದೇ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮುಂದುವರಿಯುವ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ