ಆಪರೇಷನ್ ಕಮಲದ ವಿರುದ್ಧ ಆರೋಪ-ಪ್ರತ್ಯಾರೋಪದ ನಡುವೆಯೇ, ಯಾವುದೇ ಪಕ್ಷದ ಶಾಸಕರು ದಯವಿಟ್ಟು ಪಕ್ಷಾಂತರ ಮಾಡಬೇಡಿ, ಆಯ್ಕೆಯಾದ ಪಕ್ಷಕ್ಕೆ ನಿಷ್ಠರಾಗಿ ಇರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಳ್ಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡಿದರೆ ಆ ಕ್ಷೇತ್ರದ ಜನತೆಗೆ ಅಪಮಾನ ಮಾಡಿದಂತೆ ಆಗುತ್ತದೆ. ಅಲ್ಲದೆ, ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದರಿಂದ ಅನಾವಶ್ಯಕವಾಗಿ ಚುನಾವಣೆಗಳು ಎದುರಾಗಿ ಜನರ ಮೇಲೆ ಇದರ ಭಾರ ಬೀಳುತ್ತೆ. ಆದ್ದರಿಂದ ಯಾವುದೇ ಪಕ್ಷದ ಶಾಸಕರಾಗಲಿ ಪಕ್ಷಾಂತರ ಮಾಡುವುದು ಬೇಡ. ತಾವು ಯಾವ ಪಕ್ಷದಿಂದ ಆಯ್ಕೆಯಾಗಿದ್ದೀರೋ ಅದೇ ಪಕ್ಷದಲ್ಲಿ ಐದು ವರ್ಷಗಳ ಕಾಲ ನಿಷ್ಠರಾಗಿ ಮುಂದುವರಿಯಿರಿ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಆಪರೇಶನ್ ಕಮಲ ಮಾಡುವಂತೆ ನಾನು ಯಾರಿಗೂ ಹೇಳಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಅವರು 25 ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಬರುವುದಾಗಿ ಹೇಳಿದ್ದಾರಲ್ಲ ಇದು ಸರಿಯೇ ಎಂದು ಕೇಳಿದ ಪ್ರಶ್ನೆಗೆ, ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿರಬಹುದು ಎಂದು ಉತ್ತರ ನೀಡದೆ ಜಾರಿಕೊಂಡರು. ನಾನಂತೂ ಯಾವುದೇ ಪಕ್ಷದ ಶಾಸಕರನ್ನು ನಮ್ಮ ಪಕ್ಷಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳಿಲ್ಲ, ಹೇಳುವುದೂ ಇಲ್ಲ ಎಂದು ಹೇಳಿದರು.
ಅಲ್ಲದೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ವಿರುದ್ಧ ಮಾಡಿರುವ ಆರೋಪ ಒಳ್ಳೆಯ ಬೆಳವಣಿಗೆ ಅಲ್ಲ. ಸಂವಿಧಾನ ಹುದ್ದೆಗಳ ಬಗ್ಗೆ ಮಾತನಾಡುವಾಗ, ಆರೋಪ ಮಾಡುವಾಗ ಎಚ್ಚರಿಕೆ ವಹಿಸಬೇಕು. ಶಾಸಕರಾಗಿ ಜವಾಬ್ದಾರಿ ಸ್ಥಾನದಲ್ಲಿರುವ ನಾವುಗಳೇ ಮರ್ಯಾದೆ ಕೊಡದೆ ಹೋದರೆ ಬೇರೆ ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ನಾನು ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಸಂಬಂಧ ಒಮ್ಮೆ ಎಡವಿದ್ದೇನೆ. ಆದ್ದರಿಂದ ಸಂಪುಟ ವಿಸ್ತರಣೆ ಮಾಡುವ ಮುನ್ನ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇನೆ. ಶಾಸಕಾಂಗ ಪಕ್ಷದ ಸಭೆ ಕರೆದು ಎಲ್ಲ ಶಾಸಕರ ಅಭಿಪ್ರಾಯ ಪಡೆಯುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.