ಬಂಗಾರಪ್ಪ ನನ್ನ ರಾಜಕೀಯ ಗುರು ಎಂದು ಹೇಳುವ ಮೂಲಕ ಬಂಗಾರಪ್ಪ ಅವರಿಂದ ದೂರವಾಗಿದ್ದ ಪ್ರಸ್ತುತ ಬಂಡಾಯ ಸಾರಿ ಅನರ್ಹಗೊಂಡಿರುವ ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಅಚ್ಚರಿ ಮೂಡಿಸಿದ್ದಾರೆ.
ಬಂಗಾರಪ್ಪನ ಪಡಸಾಲೆಯಿಂದ ಮುನಿಸಿಕೊಂಡು ಬಿಜೆಪಿ ಸೇರಿ ಅವರ ವಿರುದ್ಧ ರಾಜಕೀಯವಾಗಿ ಸೆಡ್ಡು ಹೊಡೆದಿದ್ದ ಬೇಳೂರು ಮಂಗಳವಾರ ಬಂಗಾರಪ್ಪ ನಿವಾಸಕ್ಕೆ ತೆರಳಿ ಅವರ 78ನೇ ಹುಟ್ಟಹಬ್ಬಕ್ಕೆ ಶುಭಾಶಯ ಹೇಳಿ, ಬಂಗಾರಪ್ಪನವರೇ ನನ್ನ ರಾಜಕೀಯ ಗುರು. ಮುಂದಿನ ರಾಜಕೀಯ ನಡವಳಿಕೆಗಳ ಬಗ್ಗೆ ಕಾಲವೇ ನಿರ್ಧರಿಸಲಿದೆ ಎಂದರು.
ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ, ಯಾರೂ ಶತ್ರುಗಳೂ ಅಲ್ಲ ಎಂಬ ನಾಣ್ಣುಡಿಗೆ ಬೇಳೂರು ಭೇಟಿಯೇ ಸಾಕ್ಷಿ. ಈ ಸಂದರ್ಭದಲ್ಲಿ ಮಾತನಾಡಿದ ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಅವರಿಗೂ ಕೂಡ ಶುಭ ಹಾರೈಸಿದರು. ಪ್ರಸ್ತುತ ರಾಜಕಾರಣ ಅಸಹ್ಯ ಮೂಡಿಸಿದೆ. ಭಿನ್ನಮತೀಯ ಚಟುವಟಿಕೆಗಳು, ಕುಸಿದಿರುವ ಆಡಳಿತ ಯಂತ್ರ, ರಾಜಕಾರಣಿಗಳ ವರ್ತನೆ ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲೇ ನೋಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.