ಬಳ್ಳಾರಿಯ ಗಣಿಧಣಿ, ರೆಡ್ಡಿ ಸಹೋದರರು ಹಾಗೂ ಸಚಿವ ಶ್ರೀರಾಮುಲು ಅವರ ನಿಕಟವರ್ತಿಗಳ ಮನೆ, ಕಚೇರಿಗಳು ಸೇರಿದಂತೆ ರಾಜ್ಯದ 60 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ರೆಡ್ಡಿ ಪಾಳಯದಲ್ಲಿ ಆತಂಕ ಮೂಡಿಸಿದೆ ಎಂದು ಮೂಲವೊಂದು ತಿಳಿಸಿದೆ.
ಈ ಹಿಂದೆಯೂ ಆದಾಯ ತೆರಿಗೆ, ಸಿಬಿಐ ಅಧಿಕಾರಿಗಳು ದಾಳಿ ನಡೆದಾಗ ರೆಡ್ಡಿ ಸಹೋದರರು ಅದಕ್ಕೆ ಅಂಜಿರಲಿಲ್ಲ. ಈ ಬಾರಿಯ ಐಟಿ ಅಧಿಕಾರಿಗಳ ದಾಳಿಯ ಮುನ್ಸೂಚನೆ ಸಚಿವ ಜನಾರ್ದನ ರೆಡ್ಡಿ ಅವರಿಗೆ ದೊರೆತಿತ್ತು. ಹಾಗಾಗಿ ತಮ್ಮ ದಾಖಲೆ ಪತ್ರಗಳನ್ನು ಸಾಕಷ್ಟು ಮುಂಜಾಗ್ರತೆ ವಹಿಸಿ ತೆಗೆದಿಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ರಾಜ್ಯ ಸರಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಧನಂಜಯ್ ಕುಮಾರ್ ಕೂಡ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
ಸೋಮವಾರ ಬೆಳಿಗ್ಗೆ ಐಟಿ ಅಧಿಕಾರಿಗಳು ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು, ಶಾಸಕ ಟಿ.ಎಚ್.ಸುರೇಶ್ ಬಾಬು, ಶಾಸಕ ಬಿ.ನಾಗೇಂದ್ರ, ಜನಾರ್ದನ ರೆಡ್ಡಿ ವಕೀಲ ಕೆ.ರಾಘವಾಚಾರ್ಲು, ರೆಡ್ಡಿ ಆಪ್ತ ಸಹಾಯಕ ಅಲಿಖಾನ್, ಮಧು, ಶಾಸಕ ಆನಂದ್ ಸಿಂಗ್ ಅವರ ವ್ಯವಹಾರಿಕ ಪಾಲುದಾರ ಅಜ್ಗರ್ ಖಾನ್, ಗಣಿ ಉದ್ಯಮಿಗಳಾದ ಖಾರದ ಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್, ಮಹೇಂದ್ರ ಜೈನ್, ಗೊಗ್ಗ ಶರಬಯ್ಯ, ಗೊಗ್ಗ ಶಾಂತಯ್ಯ, ಸೋಮಶೇಖರ, ಜಂಜಣ್ಣ, ಜಿಲ್ಲಾ ಪಂಚಾಯತ್ ಸಿಇಒ ಎಸ್.ಮುತ್ತಯ್ಯ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನ ವಶಪಡಿಸಿಕೊಂಡಿದ್ದರು. ದಾಳಿ ಇನ್ನೂ ಎರಡು ಮೂರು ದಿನಗಳ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ರೆಡ್ಡಿ ಬ್ರದರ್ಸ್‌ಗೆ ಭಯ?:ಏತನ್ಮಧ್ಯೆ ಐಟಿ ಅಧಿಕಾರಿಗಳು ತಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸಿರುವುದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲವಂತೆ. ರೆಡ್ಡಿ ಸಹೋದರರ ಆಪ್ತರು, ಅವರ ಮನೆಗೆಲಸದವರನ್ನೂ ಬಿಡದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ತಮ್ಮ ಅಕ್ರಮ ಆಸ್ತಿಯ ಗುಟ್ಟು ರಟ್ಟಾಗಬಹುದೆಂಬ ಭಯ ರೆಡ್ಡಿ ಬ್ರದರ್ಸ್ ಅವರನ್ನು ಕಾಡತೊಡಗಿದೆಯಂತೆ.
ರೆಡ್ಡಿಗಳ ಗುಂಪಿನಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತಿರುವವರು ಯಾರು ?ಅವರ ಮನೆಗಳು ಎಲ್ಲಿವೆ ?ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಳ್ಳುತ್ತಿರುವವರು ಯಾರು ? ಹೀಗೆ ಪ್ರತಿಯೊಂದು ವಿಷಯಗಳ ಬಗ್ಗೆ ಮೊದಲೇ ಮಾಹಿತಿ ಕಲೆ ಹಾಕಿದ್ದ ಅಧಿಕಾರಿಗಳು ವ್ಯವಸ್ಥಿತವಾಗಿ ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆಂದು ಮೂಲವೊಂದು ತಿಳಿಸಿದೆ.
ಏತನ್ಮಧ್ಯೆ ರಾಜ್ಯದ ಗಣಿಧಣಿ ಸಚಿವರು, ಶಾಸಕರನ್ನೇ ಗುರಿಯಾಗಿರಿಸಿಕೊಂಡು ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆಡಳಿತಾರೂಢ ಬಿಜೆಪಿ ಸರಕಾರವನ್ನು ಹಣಿಯಲು ಕೇಂದ್ರದ ಯುಪಿಎ ಸರಕಾರ ಈ ಸಂಚು ನಡೆಸಿದೆ ಎಂದು ಆರೋಪಿಸಿದೆ. ಆದರೆ ಐಟಿ ದಾಳಿಯ ಹಿಂದೆ ಕಾಂಗ್ರೆಸ್ ಕೈವಾಡ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಗುಪ್ತದಳದ ಸಲಹೆ ಮೇರೆಗೆ ಐಟಿ ದಾಳಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.