ಕೊಡಗಿಗೆ ವಿಶೇಷ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ 'ಕೊಡಗು ನ್ಯಾಷನಲ್ ಕೌನ್ಸಿಲ್' ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ ಬಳಿ ಸೋಮವಾರ ವಿಶೇಷ ರೀತಿಯ ಧರಣಿ ಸತ್ಯಾಗ್ರಹ ನಡೆಸಿ 'ಕರ್ನಾಟಕ ರಾಜ್ಯೋತ್ಸವ' ದಿನವನ್ನು ಕರಾಳ ದಿನವಾಗಿ ಆಚರಿಸಿಕೊಂಡರು.
ಸಾಂಪ್ರಾದಾಯಿಕ ಕೊಡಗು ಉಡುಗೆ ತೊಟ್ಟ ಪ್ರತಿಭಟನಕಾರರು ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಗೂರ್ಖಾಲ್ಯಾಂಡ್ ಮಾದರಿಯಲ್ಲಿ ವಿಶೇಷ ಸ್ವಾಯತ್ತತೆಯನ್ನು ಕೊಡಗಿಗೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹಿಸಿತು.
ಜಮ್ಮು ಕಾಶ್ಮೀರ ಮತ್ತಿತ್ತರ ರಾಜ್ಯಗಳಲ್ಲಿರುವಂತೆ ವಿಶೇಷ ಸ್ಥಾನಮಾನವನ್ನು ಕೊಡಗಿಗೆ ನೀಡಬೇಕು. ಶಿಕ್ಷಣ, ಉದ್ಯೋಗದಲ್ಲಿಯೂ ಕೊಡವರಿಗೆ ಮೀಸಲಾತಿ ನೀಡಬೇಕು. ಹಾಗೆಯೇ ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು ಎಂದು ಒತ್ತಾಯ ಮಾಡಿದರು.
ಸಿಎನ್‌ಸಿ ಸಂಚಾಲಕ ಎನ್. ಯು. ನಾಚಪ್ಪ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಡಗಿಗೆ ವಿಶೇಷ ಸ್ವಾಯತ್ತತೆ ನೀಡದ ಹೂರತು ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅರ್ಥವಿಲ್ಲ ಎಂದು ಹೇಳಿದರು.