ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ (ನ.3) ಮಾಡಿದ ಬೆನ್ನಲ್ಲೇ ಬಿಜೆಪಿ ಮನೆಯಲ್ಲಿ ಮತ್ತೆ ಸಚಿವ ಸ್ಥಾನ ಆಕಾಂಕ್ಷಿಗಳ ಭಿನ್ನಮತ ಸ್ಫೋಟಗೊಂಡಿದೆ. ಇದೀಗ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಚಂದ್ರಕಾಂತ್ ಬೆಲ್ಲದ್ ಅವರು ಗಡಿನಾಡು ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಮಂತ್ರಿಗಿರಿಯ ಪ್ರಬಲ ಆಕಾಂಕ್ಷಿಯಾಗಿದ್ದ ಶೃಂಗೇರಿ ಕ್ಷೇತ್ರದ ಶಾಸಕ ಜೀವರಾಜ್ ಅವರು ಕೂಡ ಸೋಮವಾರ ಸರ್ಕಾರದ ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಸಂಪುಟದಲ್ಲಿ ವರ್ತೂರು ಪ್ರಕಾಶ್, ಸುರಪುರ ಶಾಸಕ ರಾಜೂ ಗೌಡಗೆ ಅವಕಾಶ ನೀಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬೆಲ್ಲದ್ ಕೂಡ ಗಡಿನಾಡು ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
'ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ರಾಜೂ ಗೌಡರನ್ನು ಮಂತ್ರಿ ಮಾಡುತ್ತಾರೆಂದ ಮೇಲೆ, ನಾನು ನಾಲ್ಕು ಬಾರಿ ಗೆದ್ದಿದ್ದೇನೆ. ಹಾಗಾಗಿ ನನಗೂ ಮಂತ್ರಿಸ್ಥಾನ ನೀಡಬೇಕು' ಎಂದು ಬೆಲ್ಲದ್ ತಮ್ಮ ಆಕಾಂಕ್ಷೆಯನ್ನು ಹೊರಹಾಕಿದ್ದಾರೆ. ತನಗೂ ಮಂತ್ರಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ಸುರಪುರ ಕ್ಷೇತ್ರದ ಶಾಸಕ ರಾಜೂ ಗೌಡ ಹಾಗೂ ತುಮಕೂರು ಶಾಸಕ ಸೊಗಡು ಶಿವಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದರು. ಏತನ್ಮಧ್ಯೆ ಪಕ್ಷದೊಳಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತೆ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ತಮ್ಮ ಜಂಗೀಕುಸ್ತಿಯನ್ನು ಮುಂದುವರಿಸಿದ್ದಾರೆ.
ಅಲ್ಲದೇ, ಮಾಲೂರು ಕ್ಷೇತ್ರದ ಕೃಷ್ಣಯ್ಯ ಶೆಟ್ಟಿ, ಅಪ್ಪಚ್ಚು ರಂಜನ್, ಕಳಕಪ್ಪ ಬಂಡಿ, ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಇನ್ನೂ ಹಲವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ತಮಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿಲ್ಲ ಎಂಬ ಅಸಮಾಧಾನದಿಂದ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆನ್ನಲಾಗಿದೆ.