ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಆಂಗ್ಲ ಭಾಷೆಯ ನಾಮಫಲಕಕ್ಕೆ ಮಸಿ ಬಳಿಯುವ ಮೂಲಕ ಕನ್ನಡ ವಿರೋಧಿ ಧೋರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ 35 ಮಂದಿ ಕಾರ್ಯಕರ್ತರ ತಂಡ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ ಸಮೀಪ ಇದ್ದ ಆಂಗ್ಲ ಜಾಹೀರಾತು ಫಲಕದ ಮೇಲೆ ಮಸಿ ಎರಚಿದರು. ಹಾಗೂ ಆಂಗ್ಲಭಾಷೆಯ ಫಲಕವನ್ನು ಕೂಡಲೆ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಹೈಗ್ರೌಂಡ್ ಠಾಣೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿ ಸಂಜೆ ಬಿಡುಗಡೆ ಮಾಡಿದರು. 2008ರಲ್ಲಿಯೇ ರಾಜ್ಯ ಸರಕಾರ ಒಂದು ಆದೇಶ ಹೊರಡಿಸಿದೆ. ಅದರಲ್ಲಿ ಕನ್ನಡ ನಾಮ ಫಲಕ ಹೊಂದದ ಜಾಹೀರಾತು ಸಂಸ್ಥೆ ವಿರುದ್ಧ 10 ಸಾವಿರ ರೂ. ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವುದಾಗಿ ಹೇಳಿದೆ. ಆದರೆ ಇದುವರೆಗೂ ನಗರದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಹಾಗಂತ ಆಂಗ್ಲ ಫಲಕಗಳು ಇಲ್ಲವೇ ಇಲ್ಲ ಅಂತ ಅರ್ಥವೋ? ರಾಜ್ಯ ಸರಕಾರ ಹಾಗೂ ಬಿಬಿಎಂಪಿ ಎರಡರಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಹೀಗಿರುವಾಗ ಆದೇಶ ಜಾರಿಗೊಳಿಸಲು ಏನು ಸಮಸ್ಯೆ ಎಂದು ಟಿ.ಎ. ನಾರಾಯಣಗೌಡ ಬಂಧನಕ್ಕೆ ಮುನ್ನ ಪ್ರಶ್ನಿಸಿದರು.
ಮುಂದಿನ ದಿನದಲ್ಲಾದರೂ ಸರಕಾರ ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಗರದ ಎಲ್ಲಾ 28 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ನಿತ್ಯ ಒಂದು ಜಾಗ ಆಯ್ಕೆ ಮಾಡಿಕೊಂಡು ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು.