ಸಂಪುಟ ವಿಸ್ತರಣೆಗೆ ನ.3 ಎಂದು ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆಹ್ವಾನ ಪತ್ರಿಕೆ ಮುದ್ರಿಸಲಾಗಿತ್ತು. ಶಾಮಿಯಾನ ಹಾಕಲು ಜನ ಸಿದ್ದವಾಗಿದ್ದರು. ಲಘು ಉಪಹಾರಕ್ಕೆ ಮೆನು ಸಹ ತಯಾರಾಗಿತ್ತು. ಆದರೆ ರಾಜಕೀಯ ಪ್ರಹಸನದ ನಡುವೆ ಸಚಿವ ಸಂಪುಟ ವಿಸ್ತರಣೆ ದಿಢೀರ್ ರದ್ದಾಗಿದೆ. ಇದರಿಂದಾಗಿ ಸುರಪುರ ಕ್ಷೇತ್ರದ ರಾಜೂ ಗೌಡ ಬೆಂಬಲಿಗರು, ವರ್ತರು ಪ್ರಕಾಶ್ ಬೆಂಬಲಿಗರು ಈ ಸುದ್ದಿ ತಿಳಿಯುತ್ತಿದ್ದಂತೆಯೇ ನಿರಾಸೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮತ್ತೆ ಊರಿಗೆ ವಾಪಸಾಗಿದ್ದಾರೆ.
ರೆಡ್ಡಿ ಸಹೋದರರ ಬಣದ ತೀವ್ರ ಒತ್ತಡದಿಂದಾಗಿ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ತೂರು ಪ್ರಕಾಶ್ ಮತ್ತು ರಾಜೂ ಗೌಡ (ನರಸಿಂಹ ನಾಯಕ್) ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದ್ದರು. ಏತನ್ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಚಿಕ್ಕಮಗಳೂರಿನ ಸಿ.ಟಿ.ರವಿ ಹಾಗೂ ತುಮಕೂರಿನ ಸೊಗಡು ಶಿವಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ತೀವ್ರ ಒತ್ತಡ ಹೇರಿದ್ದರು.
ಒಟ್ಟಾರೆ ಇದೀಗ ಮತ್ತೆ ಸಚಿವ ಸಂಪುಟದ ವಿಸ್ತರಣೆ ರದ್ದುಗೊಂಡಿರುವುದು ರೆಡ್ಡಿ ಬಣಕ್ಕೆ ಹಿನ್ನಡೆ ಉಂಟಾದಂತಾಗಿದೆ. ರಾಜಕೀಯ ತಿಕ್ಕಾಟದ ನಡುವೆಯೇ ಅತೃಪ್ತ ಶಾಸಕರಾದ ಡಾ.ಸಾರ್ವಭೌಮ ಬಗಲಿ, ಎಸ್.ಕೆ.ಬೆಳ್ಳುಬ್ಬಿ ಅವರ ಮನವೊಲಿಸಿ ಪಕ್ಷದ ರಾಜ್ಯಾಧ್ಯಕ್ಷರಲ್ಲಿ ಕರೆತಂದು ಕ್ಷಮೆ ಕೇಳಿಸಿ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂದು ನಾಟಕದಲ್ಲಿಯೂ ರೆಡ್ಡಿ ಪಡೆಗೆ ಸೋಲು ಉಂಟಾಗಿತ್ತು.
ರೆಡ್ಡಿ ಬಣಕ್ಕೆ ಸೆಡ್ಡು ಹೊಡೆದ ಈಶ್ವರಪ್ಪ: ಇಬ್ಬರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಈ ಸಂದರ್ಭದಲ್ಲಿ ಸಿ.ಟಿ.ರವಿಗೂ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಅಲ್ಲದೇ, ಕೇವಲ ವರ್ತೂರು ಪ್ರಕಾಶ್ ಮತ್ತು ಸೊಗಡು ಅವರಿಗೆ ಮಾತ್ರ ಅವಕಾಶ ನೀಡಿದರೆ ರೆಡ್ಡಿ ಸಹೋದರರ ಮಾತು ಮಾತ್ರ ನಡೆದಂತಾಗುತ್ತದೆ. ಆ ನಿಟ್ಟಿನಲ್ಲಿ ಅವರ ಹಠವನ್ನು ಒಪ್ಪಲು ಸಾಧ್ಯವಿಲ್ಲ, ಇಷ್ಟು ದಿನ ಅವರು ಹೇಳಿದಂತೆ ಕುಣಿದಾಗಿದೆ, ಇನ್ನು ಸಾಧ್ಯವಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ. ಇದರೊಂದಿಗೆ ಬಿಜೆಪಿಯಲ್ಲಿನ ಅಸಮಾಧಾನದ ಹೊಗೆ ಶಾಶ್ವತವಾಗಿ ಆರುವ ಯಾವುದೇ ಲಕ್ಷಣ ಇಲ್ಲ ಎಂಬಂತಾಗಿದೆ.
ವರ್ತೂರು, ರವಿ, ರಾಜೂ ಗೌಡಗೆ ನಿರಾಸೆ:ಇನ್ನೇನು ಬುಧವಾರ ಬೆಳಿಗ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಕೆಂಪು ಗೂಟದ ಕಾರಿನಲ್ಲಿ ಅಡ್ಡಾಡುವ ಕನಸು ಕಂಡಿದ್ದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ಚಿಕ್ಕಮಗಳೂರಿನ ಸಿ.ಟಿ.ರವಿ, ಸುರಪುರದ ರಾಜೂ ಗೌಡ ಹಾಗೂ ತುಮಕೂರಿನ ಸೂಗಡು ಶಿವಣ್ಣ ಅವರಿಗೆ ಸಚಿವ ಸಂಪುಟ ವಿಸ್ತರಣೆ ರಾಜಕೀಯ ತಿಕ್ಕಾಟದಲ್ಲಿ ರದ್ದುಗೊಂಡಿರುವುದು ತೀವ್ರ ನಿರಾಸೆ ಉಂಟು ಮಾಡಿದೆ.
ವರ್ತೂರು ಪ್ರಕಾಶ್ ಅವರ ಬೆಂಬಲಿಗರು ದೊಡ್ಡ, ದೊಡ್ಡ ಬ್ಯಾನರ್, ಕಟೌಟ್ ಸಿದ್ದಮಾಡಿ ಇಟ್ಟುಕೊಂಡಿದ್ದರು. ಹಾರ, ತುರಾಯಿಗಳು ಕೂಡ ರೆಡಿಯಾಗಿದ್ದವು. ರಾಜೂ ಗೌಡ, ರವಿ, ವರ್ತೂರು ಬೆಂಬಲಿಗರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ ಆ ಎಲ್ಲಾ ಆಸೆಗೆ ರಾಜಕೀಯ ಬೆಳವಣಿಗೆಯಿಂದ ತಣ್ಣೀರು ಬಿದ್ದಂತಾಗಿದೆ.
ನನಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತ್ ಕುಮಾರ್ ಅವರ ಮೇಲೆ ಪೂರ್ಣ ವಿಶ್ವಾಸ ಇದೆ ಎಂದು ತಿಳಿಸಿರುವ ವರ್ತೂರು ಪ್ರಕಾಶ್, ಇನ್ನೆರಡು ದಿನಗಳೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಮನವಿ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.